ಹೊಳೆಆಲೂರ: ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಮಕ್ಕಳು ಪ್ರತಿಭಾವಂತರಾಗಿದ್ದರೂ ಸಾಧನೆಯ ಶಿಖರ ತಲುಪಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಸಾಧ್ಯವಿರುವ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಂಡು ಮಕ್ಕಳಲ್ಲಿ ಅಡಗಿರುವ ಪ್ರತಿಭೆಗೆ ಪ್ರೋತ್ಸಾಹ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗ್ರಾಮದ ಯಚ್ಚರೇಶ್ವರ ವಿದ್ಯಾಸಂಸ್ಥೆಯ ರಂಗ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಾಲೆಯ ವಾರ್ಷಿಕೋತ್ಸವ ಹಾಗೂ ನೂತನ ಶಾಲಾ ಕೊಠಡಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿದ್ಯಾರ್ಜನೆಯ ಸಮಯದಲ್ಲಿ ತಂತ್ರಜ್ಞಾನದ ಪ್ರಭಾವಕ್ಕೆ ಒಳಗಾಗಿ ಮಕ್ಕಳು ಜೀವನದಲ್ಲಿ ಎಡುವುದು ಸಹಜ. ಅಂತಹ ಮಕ್ಕಳನ್ನು ಶಿಕ್ಷಕರು, ಮಕ್ಕಳು ತಿದ್ದಿತೀಡಿ ನೈತಿಕ ಮೌಲ್ಯಗಳನ್ನು ಜಾಗೃತಗೊಳಿಸಬೇಕಿದೆ ಎಂದು ಹೇಳಿದರು.
ಕಲಾ ವಿಜ್ಞಾನ ಪ್ರದರ್ಶನ ಉದ್ಘಾಟಿಸಿದ ನರಗುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ್ರ ಪಾಟೀಲ ಮಾತನಾಡಿ, ಪುರಾತನ ಕಾಲದಲ್ಲಿ ನಮ್ಮ ದೇಶದಲ್ಲಿ ಗುರುಕುಲ ಪದ್ಧತಿ ಜಾರಿಯಲ್ಲಿತ್ತು. ಈಗ ಪಾಶ್ಚಿಮಾತ್ಯರ ಪ್ರಭಾವದಿಂದಾಗಿ ಸರ್ವಾಂಗೀಣ ಅಭಿವೃದ್ಧಿಯ ಪರಿಕಲ್ಪನೆ ಮಾಯವಾಗಿದೆ. ರ‌್ಯಾಂಕ್ ಬಂದವರು ಬುದ್ಧಿವಂತರು ಎಂಬ ಕಲ್ಪನೆ ಮೂಡಿದೆ. ಮಕ್ಕಳನ್ನು ಬರೀ ಪಠ್ಯಕ್ಕೆ ಸೀಮಿತಗೊಳಿಸಬೇಡಿ. ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಅವರಲ್ಲಿ ಅಡಗಿರುವ ಪಠ್ಯೇತರ ಚಟುವಟಿಕೆಯನ್ನು ಪ್ರೋತ್ಸಾಹಿಸಬೇಕು ಎಂದರು.
ಆಧುನಿಕತೆಯ ಬದಲು ಸಂಸ್ಕಾರಯುತ ಶಿಕ್ಷಣ ನೀಡುವುದನ್ನು ಮರೆಯಬಾರದು. ಇದದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಿದೆ. 2019ರ ಮಲಪ್ರಭಾ ನದಿಯ ಪ್ರವಾಹದಲ್ಲಿ ಈ ಭಾಗದ ಸಾಕಷ್ಟು ಶಾಲಾ ಕಾಲೇಜ್‌ಗೆ ಹಾನಿಯಾಗಿದ್ದು, ಅವುಗಳ ಅಭಿವೃದ್ಧಿಗೆ ಶಾಸಕ ಸಿ.ಸಿ. ಪಾಟೀಲ ಅನುದಾನ ನೀಡಲಿದ್ದಾರೆ ಎಂದು ಭರವಸೆ ನೀಡಿದರು.
ಯಚ್ಚರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕೆ.ಸಿ. ಹಿ ರೇಮಠ ಪಾಟೀಲ, ಕೆಸಿಸಿ ಬ್ಯಾಂಕ್ ನಿರ್ದೇಶಕ ಜಿ.ಪಿ. ಪಾಟೀಲ, ಎಸ್.ಎಂ. ಪಾಟೀಲ, ಕಾರ್ಯದರ್ಶಿ ಪಾಂಡುರಂಗ ಪತ್ತಾರ, ಡಿ.ಆರ್. ನಾಯಕ, ಮಹೇಶಪ್ಪ ಐವಳ್ಳಿ, ಸಹ ಕಾರ್ಯದರ್ಶಿ ವೀರಯ್ಯ ವಸ್ತ್ರದ ಇತರರಿದ್ದರು. ಎಸ್.ಕೆ. ಆಡಿನ, ಮೀನಾಕ್ಷಿ ಬಡಿಗೇರ ಕಾರ್ಯಕ್ರಮ ನಿರ್ವಹಿಸಿದರು.