ಜಿಲ್ಲೆ

ಕಸಾಯಿಖಾನೆಗೆ ಹೊರವಲಯದಲ್ಲಿ ಜಾಗ ಗುರುತಿಸಿ

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಕೆಲ ಪ್ರದೇಶಗಳಿಗೆ ಶನಿವಾರ ಬೆಳಗ್ಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಕರ್ನಾಟಕ ಉಪ ಲೋಕಾಯುಕ್ತ ನ್ಯಾ. ಕೆ.ಎನ್​. ಫಣೀಂದ್ರ, ಜನರಿಗೆ ತೊಂದರೆ ಆಗದಂತೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು. ಇದಲ್ಲದೆ ಕೆಲ ಕಡೆಗಳಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡರು. ಶಿವಾಜಿ ವೃತ್ತ ಬಳಿಯ ಕಸಾಯಿಖಾನೆ ವೀಕ್ಷಿಸಿದ ಅವರು, ಕಸಾಯಿಖಾನೆಗಳು ಜನನಿಬಿಡ ಸ್ಥಳಗಳಲ್ಲಿರುವುದು ಸರಿಯಲ್ಲ. ಇದು ಅನೇಕ ಕಾಯಿಲೆಗಳಿಗೆ ಕಾರಣವಾಗಲಿದೆ. ಸಾಧ್ಯವಾದರೆ ಊರ ಹೊರಗೆ ಜಾಗ ಗುರುತಿಸಿ ಅಲ್ಲಿಗೆ ಸ್ಥಳಾಂತರಿಸಿ. ಈ ಜಾಗವನ್ನು ಸುಂದರ ಉದ್ಯಾನ, ಇಲ್ಲವೇ ಮಾರುಕಟ್ಟೆಗೆ ಬಳಸಿಕೊಳ್ಳಬೇಕು ಎಂದರು. ಕಸಾಯಿಖಾನೆಯಲ್ಲಿ ಸ್ವಚ್ಛತೆ ಇಲ್ಲ. ಇಲ್ಲಿನ ಗಟಾರುಗಳ ಸ್ವಚ್ಛತೆ ಕಂಡು ಎಷ್ಟೋ ದಿನಗಳಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸ್ವಚ್ಛತಾ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನಿತ್ಯ ನಗರ ಸುತ್ತಿ ಗಮನವಹಿಸಬೇಕು ಎಂದು ಪಾಲಿಕೆ ಆಯುಕ್ತರು ಹಾಗೂ ವಲಯ ಕಚೇರಿ ಸಹಾಯಕ ಆಯಕ್ತರಿಗೆ ಎಚ್ಚರಿಕೆ ನೀಡಿದರು. ಹೊಸಯಲ್ಲಾಪುರದ ಕಸ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ನೌಕರರ ಆರೋಗ್ಯದ ದೃಷ್ಟಿಯಿಂದ ಸುರಕ್ಷತಾ ಕ್ರಮ ವಹಿಸಬೇಕು. ನೌಕರರಿಗೆ ಕೈಗವಸು, ಬೂಟು, ಹೆಲ್ಮೆಟ್​ ನೀಡಬೇಕು ಎಂದು ಸೂಚಿಸಿದ ಅವರು, ಅಲ್ಲೇ ಪಕ್ಕದಲ್ಲಿನ ಕೋಳಿಕೆರೆ ಸಂರಕ್ಷಣೆಗೆ ಕ್ರಮವಹಿಸಿ. ಕೆರೆ ಸರ್ವೇ ಮಾಡಿಸಿ ಒತ್ತುವರಿ ತೆರವು ಮಾಡಿಸಿ. ನಂತರ ಹೊಲಸು ನೀರು ಕೆರೆಗೆ ಸೇರದಂತೆ ಅಭಿವೃದ್ಧಿ ಕಾರ್ಯ ನಡೆಸಲು ಸೂಚಿಸಿದರು. ನಂತರದಲ್ಲಿ ಮೆಟ್ರಿಕ್​ ನಂತರದ ಸ್ನಾತಕೋತ್ತರ ಬಾಲಕಿಯರ ಹಾಗೂ ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಬಾಲಕಿಯರ ನಿಲಯದಲ್ಲಿ ವಾರ್ಡನ್​ ಸರಿಯಾಗಿಲ್ಲ. ಅವರ ಮೇಲೆ ಕ್ರಮವಹಿಸಬೇಕು. ಕಟ್ಟಡ ಸುತ್ತ ಕಸ, ಕಟ್ಟಡ ನಿರ್ವಹಣೆಗೆ ಆದ್ಯತೆ ನೀಡಿಲ್ಲ. ತರಕಾರಿ ಕೆಟ್ಟಿದ್ದರೂ ಗಮನಿಸಿಲ್ಲ. ಹೀಗಾಗಿ ಈ ವಿಚಾರವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. 15 ದಿನಗಳಲ್ಲಿ ಆವರಣ ಸ್ವಚ್ಛಗೊಳಿಸಿದ ಭಾವಚಿತ್ರ ಹಾಗೂ ವೀಡಿಯೋ ಕಳುಹಿಸಬೇಕು. ನಂತರವೇ ಪ್ರಕರಣ ಮುಕ್ತಾಯಗೊಳಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭಾ ಪಿ. ಅವರಿಗೆ ಎಚ್ಚರಿಸಿದರು. ಬಾಲಕರ ನಿಲಯದಲ್ಲಿನ ಸಮಸ್ಯೆಗಳ ಕುರಿತು ವಿದ್ಯಾಥಿರ್ಗಳು ಅಳಲು ತೋಡಿಕೊಂಡರು. ಹಾಸಿಗೆ ಇಲ್ಲ. ಕ್ರೀಡಾ ಉಪಕರಣ ಇಲ್ಲ. ಊಟದ ಸಮಸ್ಯೆ, ಗ್ರಂಥಾಲಯ ಸೇರಿ ಅನೇಕ ಸಮಸ್ಯೆಗಳಿವೆ ಎಂದು ಹೇಳಿಕೊಂಡರು. ಇದನ್ನೆಲ್ಲ ಗಮನಿಸಿದ ಫಣೀಂದ್ರ ಅವರು, ಕೂಡಲೇ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸಿ ಮಾಹಿತಿ ನೀಡಬೇಕು ಎಂದರು. ಸಮಾಧಿ ರಕ್ಷಣೆ ಮಾಡಿ: ಕಸಾಯಿಖಾನೆ ಜಾಗದಲ್ಲಿದ್ದ ಬ್ರಿಟಿಷ್ ಅಧಿಕಾರಿ ಥ್ಯಾಕರೆ ಸಮಾಧಿ ಗಮನಿಸಿ ಅಚ್ಚರಿ ವ್ಯಕ್ತಪಡಿಸಿದ ಫಣೀಂದ್ರ, ಪ್ರಾಚ್ಯ ವಸ್ತು ಇಲಾಖೆ ಇಂತಹ ಸ್ಮಾರಕಗಳನ್ನು ರಕ್ಷಿಸುವ ಕೆಲಸ ಮಾಡಬೇಕು. ಇಲಾಖೆ ಅಧಿಕಾರಿಗಳು ಈ ಜಾಗದ ಸಮಗ್ರ ಮಾಹಿತಿ ನೀಡಬೇಕು. ಇಲ್ಲಿನ ಸ್ಮಾರಕಗಳ ರಕ್ಷಣೆ ಜತೆಗೆ ಇಲ್ಲಿ ಸುಂದರ ಉದ್ಯಾನ ನಿರ್ಮಿಸಿ ಪ್ರವಾಸಿ ತಾಣ ಮಾಡಬಹುದು ಎಂದು ಸಲಹೆ ನೀಡಿದರು. ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಿಇಒ ಸ್ವರೂಪ ಟಿ.ಕೆ., ಪಿ. ಶ್ರೀನಿವಾಸಿ, ನರಸಿಂಹಸಾ ಎಂ.ವಿ., ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಜಿಲ್ಲಾ ಲೋಕಾಯುಕ್ತ ಪೊಲೀಸ ಅಧೀಕ್ಷಕ ಹನುಮಂತರಾಯ, ವಿವಿಧ ಇಲಾಖೆ ಅಧಿಕಾರಿಗಳು, ಇತರರು ಇದ್ದರು.

ಮೆಟ್ರಿಕ್​ ನಂತರದ ಸ್ನಾತಕೋತ್ತರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದಾಗ ಅಲ್ಲಿ ಊಟಕ್ಕೆ ತಟ್ಟೆ, ಲೋಟ ಸಮರ್ಪಕವಾಗಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಉಪ ಲೋಕಾಯುಕ್ತ ಕೆ.ಎನ್​. ಫಣೀಂದ್ರ, ವಿದ್ಯಾರ್ಥಿಗಳಿಗೆ ಅಗತ್ಯ ಸೌಕರ್ಯಗಳನ್ನು ನೀಡಿ. ತಟ್ಟೆ, ಲೋಟ ಕೊಡಿಸುವ ಜನರು ಸಾಕಷ್ಟಿದ್ದಾರೆ. ಬೇಕಿದ್ದರೆ ನಾನೇ ಸ್ಪಾನ್ಸರ್​ ಮಾಡುತ್ತೇನೆ. ಹಣ ಕೊಟ್ಟು ಹೋಗುತ್ತೇನೆ ಎಂದು ಹೇಳಿದ್ದಲ್ಲದೆ, ಒಂದು ದಿನದಲ್ಲಿ ವಿದ್ಯಾರ್ಥಿಗಳಿಗೆ ತಟ್ಟೆ, ಲೋಟ ವ್ಯವಸ್ಥೆ ಮಾಡಬೇಕು ಎಂದರು.ನಾನೇ ಸ್ಪಾನ್ಸರ್​ ಮಾಡ್ತೀನಿ