ಮಂಡ್ಯ: ಶಿಕ್ಷಕರಲ್ಲಿ ನಿರಂತರ ಅಧ್ಯಯನವಿಲ್ಲದಿದ್ದರೆ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಸಾಧ್ಯವಿಲ್ಲ. ಹಾಗಾಗಿ ಶಿಕ್ಷಕರು ಸದಾ ಅಧ್ಯಯನಶೀಲರಾಗಬೇಕು. ಈ ಮೂಲಕ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಕಿವಿಮಾತು ಹೇಳಿದರು.
ನಗರದ ಹರ್ಡೀಕರ್ ಭವನದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಮಂಡ್ಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು. ಏಕೆಂದರೆ ದೇಶದ ಭವಿಷ್ಯದ ಪ್ರಜೆಗಳನ್ನು ಹುಟ್ಟು ಹಾಕುವವರು ಶಿಕ್ಷಕರು. ಪ್ರತಿ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಕರ ಮಾಡಬೇಕು. ಆಗ ಮಾತ್ರ ಒಬ್ಬ ವಿದ್ಯಾರ್ಥಿ ಸಮಾಜದಲ್ಲಿ ಎತ್ತರದ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದರು.
ಇತ್ತೀಚೆಗೆ ಪರಿಸರ ನಾಶದಿಂದ ಹವಾಮಾನ ವೈಪರೀತ್ಯವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಕಾಲೇಜು ಹಾಗೂ ಪೌಢಶಾಲಾ ಶಿಕ್ಷಕರಿಗಿಂತ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಭಾವ ಮಕ್ಕಳ ಮೇಲೆ ಬೀರಿರುತ್ತದೆ. ತಮ್ಮ ಪ್ರಾಥಮಿಕ ಶಿಕ್ಷಕರನ್ನು ಯಾರೊಬ್ಬರು ಮರೆಯಲು ಸಾಧ್ಯವಿಲ್ಲ ಎಂದರು.
ಅಲಯನ್ಸ್‌ನ ಸೌತ್ ಮಲ್ಪಿಪಲ್ ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು ಮಾತನಾಡಿ, ದೇಶದ ಮೊದಲ ಮಹಿಳಾ ಶಿಕ್ಷಕಿ ಜ್ಯೋತಿ ಬಾಫುಲೆ ಅವರ ಜನ್ಮದಿನವನ್ನು ರಾಜ್ಯ ಸರ್ಕಾರ ಮಹಿಳಾ ಶಿಕ್ಷಕರ ದಿನವನ್ನಾಗಿ ಆಚರಿಸಲಿ. ಸೆ.5ರಂದು ಸರ್ವಪಲ್ಲಿ ರಾಧಾಕೃಷ್ಣ ಜನ್ಮದಿನೋತ್ಸವದೊಂದು ಶಿಕ್ಷಕರ ದಿನವನ್ನು ಆಚರಣೆ ಮಾಡಲಾಗುವುದು. ಜ್ಯೋತಿ ಬಾಫುಲೆ ಅವರ ಜನ್ಮದಿನದಂದು ಮಹಿಳಾ ಶಿಕ್ಷಕಿಯರ ದಿನಾಚರಣೆ ಮಾಡಿದರೆ ಸೂಕ್ತ. ಪ್ರಸ್ತುತ ವಿಜ್ಞಾನ ಶಿಕ್ಷಕರೇ ಇಲ್ಲದಂತಾಗಿದೆ. ಪರಿಸ್ಥಿತಿ ಹೀಗಿರುವಾಗ ಗುಣಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ?. ಶಿಕ್ಷಣ ಹಾಗೂ ಆರೋಗ್ಯ ಇಲಾಖೆಗಳು ಸುಧಾರಿಸಿದ ಹೊರತು ಯಾವುದೇ ಅಭಿವೃದ್ಧಿ ಅಸಾಧ್ಯ ಎಂದು ಅಭಿಪ್ರಾಯಪಟ್ಟರು.
ಅಲಯನ್ಸ್‌ನ ಜಿಲ್ಲಾ ಪ್ರಾಂತಪಾಲ ಎಚ್.ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಭಾರತ ಸೇವಾ ದಳದ ಕಾರ್ಯದರ್ಶಿ ಜಿ.ವಿ.ನಾಗರಾಜು ಪ್ರಶಸ್ತಿ ಪುರಸ್ಕೃತರನ್ನ ಅಭಿನಂದಿಸಿದರು. ಶಿಕ್ಷಕ ಕೆ.ಆರ್.ಶಶಿಧರ ಈಚಗೆರೆ, ಅಲಯನ್ಸ್ ಸಂಸ್ಥೆಯ 2ನೇ ಉಪ ಪ್ರಾಂತಪಾಲ ಕೆ.ಎಸ್.ಚಂದ್ರಶೇಖರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿ.ಎಸ್.ನಾಗರಾಜು, ಆರ್.ಮಹೇಶ್, ಪ್ರೊ.ಡೇವಿಡ್, ಎಂ.ಲೋಕೇಶ್ ಇತರರಿದ್ದರು.
ಆದರ್ಶ ಶಿಕ್ಷಕ ಪ್ರಶಸ್ತಿ ಗೌರವ
ಇದೇ ಸಂದರ್ಭದಲ್ಲಿ ಡಾ.ನೀಲಕಂಠ, ಡಾ.ಸಿದ್ದಲಿಂಗಪ್ಪ ಹೂಗಾರ್, ಡಾ.ಎಚ್.ಎಂ.ಕಾಂತರಾಜು, ಎಂ.ಪಿ.ಯಶ್ವಂತ್, ಶ್ರೀಕಾಂತ, ಶೇಖರ್, ಪ್ರೊ.ಡೇವಿಡ್, ಪ್ರೀತಿ ರಂಗನಾಥ್, ಬಿ.ಸಿ.ಕಾವ್ಯಾ, ಎಂ.ಎನ್.ನಂದಿನಿ, ಭಾರ್ಗವಿ, ಎಚ್.ಆರ್.ಕನ್ನಿಕಾ, ಎಸ್.ಶಿವಕುಮಾರ್, ಎಚ್.ಪಿ.ಪ್ರಶಾಂತ್, ಕೆ.ಆರ್.ಶಶಿಧರ್, ಕೆ.ಟಿ.ನಾರಾಯಣರಾಜ್ ಅರಸ್, ಡಿ.ಎಸ್.ಕೃಷ್ಣೇಗೌಡ, ಎಚ್.ಕೆ.ಕೃಷ್ಣ, ಸಿ.ರಾಧಾ, ಮಲ್ಲೇಶ್, ಯಶ್ವಂತ್, ಅಮೃತವರ್ಷಿಣಿ, ಕೆ.ಸಿ.ಸುನೀಲ್, ಟಿ.ಎನ್.ಮನುಕುಮಾರ್, ಯು.ಎಸ್.ರವಿ, ಸಿ.ರಮ್ಯಾ, ವೈ.ಸಿ.ಉಮೇಶ್, ಕೆ.ಸುಜಾತಾ, ಮಮತಾ, ಸಿ.ಸವಿತಾ, ಎಂ.ಎಸ್.ರಾಜಶೇಖರ್, ಕೆ.ನಾಗರಾಜು, ಜೆ.ಎನ್.ನವೀನಕುಮಾರಿ, ಪ್ರಮೀಳಾ ಶಿವಶಂಕರಸ್ವಾಮಿ, ಅಂಬುಜಾಕ್ಷಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.