ಜಿಲ್ಲೆ

ಉದ್ಯಮಶೀಲತೆ ತರಬೇತಿ ಶಿಬಿರಕ್ಕೆ ಚಾಲನೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಇಲ್ಲಿಯ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಸೇರಿ ದೇಶದ 9 ಸ್ಥಳಗಳಲ್ಲಿ ಆಯೋಜಿಸಿರುವ 5 ದಿನಗಳ ಆವಿಷ್ಕಾರ, ವಿನ್ಯಾಸ ಮತ್ತು ಉದ್ಯಮಶೀಲತೆ ಕುರಿತ ತರಬೇತಿ ಶಿಬಿರಕ್ಕೆ ಸೋಮವಾರ ಚಾಲನೆ ನೀಡಲಾಯಿತು.

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಇನ್ನೋವೇಶನ್ ಸೆಲ್ ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಆಶ್ರಯದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ಉದ್ಯಮ ಕ್ಷೇತ್ರದ ವೃತ್ತಿಪರರಿಗಾಗಿ ಶಿಬಿರ ಆಯೋಜಿಸಲಾಗಿದೆ.

ಎಐಸಿಟಿಇ ಚೇರ್ಮನ್ ಪ್ರೊ. ಟಿ.ಜಿ. ಸೀತಾರಾಮ ದೆಹಲಿಯಿಂದ ವರ್ಚುವಲ್ ಆಗಿ ಉದ್ಘಾಟಿಸಿದರು. ಎಂಐಸಿ ನಿರ್ದೇಶಕ ಯೋಗೇಶ ಬ್ರಹ್ಮಾಂಕರ್ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ನವೋದ್ಯಮಗಳ ಬೆಳವಣಿಗೆಗೆ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಉತ್ತಮ ಕೊಡುಗೆ ನೀಡುತ್ತಿದೆ ಎಂದು ಪ್ರಶಂಸಿಸಿದರು.

ಕೆಎಲ್​ಇ ತಾಂತ್ರಿಕ ವಿವಿಯ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಕುಲಪತಿ ಡಾ. ಅಶೋಕ ಶೆಟ್ಟರ್, ವಾಧ್ವಾನಿ ಫೌಂಡೇಶನ್​ನ ವಿಶಾಲ ನಾಯರ್, ಧನುಶ್, ವಿವಿಯ ಡೀನ್​ಗಳಾದ ಡಾ. ಪ್ರಕಾಶ ತೇವರಿ, ಡಾ. ಬಿ.ಬಿ. ಕೊಟ್ಟೂರಶೆಟ್ಟರ್, ಪ್ರೊ. ಬಿ.ಎಲ್. ದೇಸಾಯಿ ಪಾಲ್ಗೊಂಡಿದ್ದರು.

ಭವಿಷ್ಯದ ಆವಿಷ್ಕಾರಗಳನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಪ್ರಾಜೆಕ್ಟ್ ಹಾಗೂ ಮೂಲ ಮಾದರಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಪ್ರದರ್ಶನದ ಮಳಿಗೆಗಳಿಗೆ ಭೇಟಿ ನೀಡಿದ ಗಣ್ಯರು, ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು.