ಜಿಲ್ಲೆ

ಇಡಗುಂಜಿ ಯಕ್ಷಗಾನ ಮಂಡಳಿಗೆ ಯುನೆಸ್ಕೋ ಮಾನ್ಯತೆ

ಕಾರವಾರ: ಹೊನ್ನಾವರ ಕೆರೆಮನೆಯ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿಗೆ ಯುನೆಸ್ಕೋ ಮಾನ್ಯತೆ ಲಭಿಸಿದೆ. 

ಕಳೆದ ಜೂನ್ 11ಮತ್ತು 12 ರಂದು ಯುನೆಸ್ಕೋ ಮುಖ್ಯ ಕಚೇರಿಯಲ್ಲಿ‌ ನಡೆದ 10 ನೇ ಅಧಿವೇಶನದಲ್ಲಿ ಮಾನ್ಯತೆ ಘೋಷಿಸಲಾಗಿದೆ ಎಂದು ಯಕ್ಷಗಾನ ಮಂಡಳಿಯ ನಿರ್ಧೇಶಕ ಶಿವಾನಂದ ಹೆಗಡೆ ತಿಳಿಸಿದ್ದಾರೆ. ಯುನೆಸ್ಕೋ 2003  ರ ಅಮೂರ್ತ ಸಾಂಸ್ಕೃತಿಕ  ಪರಂಪರೆ ಜಗತ್ತಿನ ಸಂರಕ್ಷಣೆ, ಆಂತರಿಕ ಸಮಿತಿಗೆ ಸಲಹೆ ಮಾಡಲು  ಮಂಡಳಿಯು ಈಗ ಮಾನ್ಯತೆ ಪಡೆದಿದೆ.

ಇದು ಮಂಡಳಿಯು ಸುದೀರ್ಘವಾಗಿ ಯಕ್ಷಗಾನದ ಸಂವರ್ಧನೆ,ಪರಂಪರೆ ಪ್ರಸಾರ,ಪ್ರಚಾರ,ದಾಖಲಾತಿ ಮುಂತಾದ ಕ್ಷೇತ್ರಗಳಲ್ಲಿ ಮಾಡಿದ ಪ್ರಯತ್ನ ಹಾಗೂ ಸಾಧನೆಗೆ ಅಂತರಾಷ್ಟ್ರೀಯ ಸಾಂಸ್ಲೃತಿಕ ಪರಂಪರೆಯ ಸಮುದಾಯದಲ್ಲಿ ಸಿಕ್ಕ ಗೌರವವಾಗಿದೆ.

ಹೊನ್ನಾವರ ತಾಲೂಕಿನ ಗುಣವಂತೆ ಗ್ರಾಮದಲ್ಲಿ ರಂಗಮಂದಿರ,ಯಕ್ಷಗಾನ ಪ್ರದರ್ಶನ,ಯಕ್ಷಗಾನ ಗುರುಕುಲ,ಶಿಕ್ಷಣ, ಆಟವೇ ಪಾಠ, ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ, ಭಾಸಂ, ಪ್ರಾತ್ಯಕ್ಷತೆ, ಅಧ್ಯಯನ, ಕಾರ್ಯಾಗಾರ ಮುಂತಾದ ಕ್ಷೇತ್ರದಲ್ಲಿ ಕಳೆದ 90 ವರ್ಷಗಳಿಂದ ಸಕ್ರೀಯವಾಗಿ ತೊಡಗಿಸಿಕೊಂಡಿರುವ ಮಂಡಳಿಯ ಸಾಧನೆ ಅಪಾರವಾಗಿದೆ ಎಂದು ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದ್ದಾರೆ.

1934 ರಲ್ಲಿ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಸ್ಥಾಪಿತವಾದ ಇಡಗುಂಜಿ ಯಕ್ಷಗಾನ ಮಂಡಳಿಯು ಶಂಭು ಹೆಗಡೆ ಅವರ ನೇತೃತ್ವದಲ್ಲಿ ಘಟ್ಟಿ ಹೆಜ್ಜೆಯನ್ನು ಇಟ್ಟಿತು. ಹಾಲಿ ಶಿವಾನಂದ ಹೆಗಡೆ ಕೆರೆಮನೆ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಮೂಲ ದಕ್ಷಿಣೋತ್ತರ ಕನ್ನಡದ ಐಕಾನಿಕ್ಕ‌ ಲೆಯಾದ ಯಕ್ಷಗಾನವನ್ನು ವಿಶ್ವ ಮಟ್ಟದಲ್ಲಿ ಪ್ರಸಾರ ಮಾಡಿದ ಕೀರ್ತಿ ಕೆರೆಮನೆ ಯಕ್ಷಗಾನ ಮಂಡಳಿಗೆ ಸಲ್ಲುತ್ತದೆ.

ಅಮೆರಿಕ, ಇಂಗ್ಲೆಂಡ್‌, ಸ್ಪೇನ್‌ ಬರ್ಹೇನ್‌, ಫ್ರಾನ್ಸ್‌, ಚೈನಾ, ನೇಪಾಳ ಸೇರಿ ವಿಶ್ವದ ವಿವಿಧೆಡೆ ಸೇರಿ ದೇಶದ ಇತರ ಹಲವು ರಾಜ್ಯಗಳಲ್ಲಿ ಒಟ್ಟು ಇದುವರೆಗೂ 9 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ನೀಡಲಾಗಿದೆ. ಸಂಪ್ರದಾಯವನ್ನು ಉಳಿಸಿಕೊಂಡು, ಯಕ್ಷಗಾನಕ್ಕೆ ಹೊಸತನ ನೀಡುವಲ್ಲಿ ಕೆರೆಮನೆಯ ಇಡಗುಂಜಿ ಮಂಡಳಿ ನೀಡಿರುವ ಕೊಡುಗೆ ಅಪಾರ.

ಯಕ್ಷಗಾ ಕಲೆಗೆ ಇಡಗುಂಜಿ ಮೇಳದ ಕೊಡುಗೆ ಕುರಿತು 1998 ರಲ್ಲಿ ಕವಿವಿಯಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಡಾಕ್ಟರೇಟ್‌ ಲಭಿಸಿದೆ. ಕೆರೆಮನೆ ಎಂಬುದು ಒಂದು ಯಕ್ಷಶಾಲೆ, ಯಕ್ಷಗಾನದ ಒಂದು ಮಾಡೆಲ್‌ ಯುನಿವರ್ಸಿಟಿಯಂತಾಗಿದೆ. ಮೇಳದಲ್ಲಿ ಬೆಳೆದ ಅದೆಷ್ಟೋ ಕಲಾವಿದರು ಸುಸಂಸ್ಕೃತ, ಶಾಸ್ತ್ರಬದ್ಧ ಹಾಗೂ ಪ್ರಭಾವಿ ಕಲಾವಿದರಾಗಿ ಹೆಸರಾಗಿದ್ದಾರೆ. ಕೆರೆಮನೆ ಶಂಭು ಹೆಗಡೆ ಹಾಗೂ ಮಹಾಬಲ ಹೆಗಡೆ ಅವರು ಕೇಂದ್ರ ಸಂಗೀತ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ಯುನೆಸ್ಕೋ ಎಂಬುದು ವಿಶ್ವ ಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವಾಗಿದೆ. ವಿಶ್ವದಲ್ಲಿ ಕಲೆ, ಸಂಸ್ಕೃತಿ, ಶಿಕ್ಷಣಕ್ಕೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಈ ಮೂಲಕ ವಿಶ್ವದಾದ್ಯಂತ ಶಾಂತಿ ಸುಭದ್ರತೆ ನೆಲೆಸುವಂತೆ ಮಾಡಲು ಯುನೆಸ್ಕೋ ಫ್ರಾನ್ಸ್‌ ದೇಶಧ ಪ್ಯಾರೀಸ್‌ನಲ್ಲಿ ಕೇಂದ್ರ ಕಚೇರಿ ಹೊಂದಿ ಕಾರ್ಯ ನಿರ್ವಹಿಸುತ್ತದೆ. ಇದರೊಂದು ವಿಶ್ವದ ಅಧಿಕೃತ ಮಾನ್ಯತೆಯಾಗಿದೆ.