ಸೀರೋ ಸರ್ವೇ ಕುರಿತ ಕಾರ್ಯಾಗಾರದಲ್ಲಿ ಐಸಿಎಂಆರ್‌ನ ನಿರ್ದೇಶಕ ಡಾ. ಮನೋಜ್ ಮುರೇಕರ್, ಡಾ. ಪಿ.ಎಸ್.ಬಾಲು, ಡಾ. ಗುಡದಪ್ಪ ಕಸಬಿ, ಡಾ.ಲತಾ ಆರ್ ತೆಲಂಗ್, ಡಾ. ಸಿದ್ದಲಿಂಗಪ್ಪ, ಡಾ. ವಿನಾಯಕ್ ಇದ್ದರು. 
ಜಿಲ್ಲೆ

ಕೆಎಫ್‌ಡಿ ನಿಯಂತ್ರಣಕ್ಕಾಗಿ ಐಸಿಎಂಆರ್‌ನಿಂದ ಸೀರೋ ಸರ್ವೆ

ನವೀನ ಬಿ.ಎಂ

ಶಿವಮೊಗ್ಗ: ಕೆಎಫ್‌ಡಿ(ಕ್ಯಾಸನೂರು ಫಾರೆಸ್ಟ್ ಡಿಸೀಜ್) ಹರಡುವಿಕೆ ಪ್ರಮಾಣ ಅರ್ಥ ಮಾಡಿಕೊಂಡು ನಿಯಂತ್ರಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ(ಐಸಿಎಅಆರ್) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಜಿಲ್ಲೆಯಲ್ಲಿ ಸೀರೋ ಸರ್ವೇ ನಡೆಸಿತು.

ಮಂಗನ ಜ್ವರವೆಂದು ಕರೆಯಲ್ಪಡುವ ಕೆಎಫ್‌ಡಿ ಸಾಮಾನ್ಯವಾಗಿ ಪಶ್ಚಿಮಘಟ್ಟದ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಕಂಡುಬಂದಿದ್ದರೆ, ಈಗ ಇದು ಕರ್ನಾಟಕದ ಇತರೆ ಜಿಲ್ಲೆ ಹಾಗೂ ಪಕ್ಕದ ರಾಜ್ಯಗಳಿಗೂ ಹರಡಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ ತಿಳಿಸಿದ್ದಾರೆ.

ಈ ರೋಗದ ಹರಡುವಿಕೆ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಅಆರ್) ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ(ಎನ್‌ಐಇ) ವಿಭಾಗವು ಪಶ್ಚಿಮಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳ ಹಾಗೂ ವಯಸ್ಕರಲ್ಲಿ ಕೆಎಫ್‌ಡಿ ಸೀರೋ ಸರ್ವೇ(ರಕ್ತಸಾರ ಸಮೀಕ್ಷೆ) ನಡೆಸುತ್ತಿದೆ. ಈ ಸೀರೋ ಸರ್ವೇಯನ್ನು ಕರ್ನಾಟಕ, ಮಹಾರಾಷ್ಟ, ಗೋವಾ, ಕೇರಳ ಮತ್ತು ತಮಿಳುನಾಡು ಸೇರಿ ಐದು ರಾಜ್ಯಗಳಲ್ಲಿ ನಡೆಸಲಾಗುತ್ತಿದೆ ಎಂದಿದ್ದಾರೆ.

ಡಾ. ಮನೋಜ್ ನೇತೃತ್ವದಲ್ಲಿ ಕಾರ್ಯಾಗಾರ: ಸಮೀಕ್ಷೆ ಕುರಿತಂತೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ, ಐಸಿಎಂಆರ್‌ನ ನಿರ್ದೇಶಕ ಡಾ. ಮನೋಜ್ ಮುರೇಕರ್ ನೇತೃತ್ವದಲ್ಲಿ ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕಾರ್ಯಾಗಾರ ನಡೆಸಿತು. ಕಾಲೇಜಿನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್.ಬಾಲು, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಸುಬ್ಬಯ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿ ಡಾ.ಲತಾ ಆರ್ ತೆಲಂಗ್, ಪ್ರಾಚಾರ್ಯ ಡಾ. ಸಿದ್ದಲಿಂಗಪ್ಪ, ಡೀನ್ ಡಾ. ವಿನಾಯಕ್ ಉಪಸ್ಥಿತರಿದ್ದರು.

ಎಲ್ಲೆ, ಹೇಗೆ ಸಮೀಕ್ಷೆ ?

ಸಮೀಕ್ಷೆ ಯೋಜನೆಯಂತೆ ಎನ್‌ಐಇ ಚೆನ್ನೈ ತಂಡವು ಉತ್ತರ ಕನ್ನಡ ಜಿಲ್ಲೆಯ 10 ಗ್ರಾಮಗಳು, ಉಡುಪಿ ಜಿಲ್ಲೆಯ 6, ಶಿವಮೊಗ್ಗದ 7, ಕೊಡಗಿನ 8, ಹಾಸನ, ಬೆಳಗಾವಿಯ ತಲಾ 1, ದಕ್ಷಿಣ ಕನ್ನಡದ 14, ಚಿಕ್ಕಮಗಳೂರಿನ 4 ಗ್ರಾಮಗಳಲ್ಲಿ ಸಿರೋ ಸರ್ವೇ ನಡೆಸಲಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ಮಾ.22ರಿಂದ ಏ.15ರವರೆಗೆ ಸೀರೋ ಸರ್ವೆ ನಡೆಸಿದೆ. ಪ್ರತಿ ಗ್ರಾಮದಲ್ಲಿ 6ರಿಂದ 18 ವರ್ಷದೊಳಗಿನ 14 ಮಕ್ಕಳಿಂದ ಹಾಗೂ 18ರಿಂದ 50 ವರ್ಷದೊಳಗಿನ 22 ವಯಸ್ಕರಿಂದ ರಕ್ತದ ಮಾದರಿ ಸಂಗ್ರಹಿಸಲಾಗುತ್ತದೆ. 36 ಜನರನ್ನು ಆಯಾ ಗ್ರಾಮಗಳಲ್ಲಿ ರ‌್ಯಾಂಡಮ್ ಆಗಿ ಆಯ್ಕೆ ಮಾಡಲಾಗುತ್ತದೆ. ಸಂಗ್ರಹಿಸಿದ ರಕ್ತದ ಮಾದರಿಗಳನ್ನು ನಿಯಮಿತವಾಗಿ ಪುಣೆಯ ಐಸಿಎಮ್‌ಆರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರೋಲಾಜಿಗೆ ಕಳುಹಿಸಿ ಕೆಎಫ್‌ಡಿ ವೈರಸ್ ವಿರೋಧಿ ಪ್ರತಿಕಾಯಗಳನ್ನು ಪರೀಕ್ಷಿಸಲಾಗುತ್ತದೆ.