ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಐಸಿಡಿಎಸ್ ಯೋಜನೆಗೆ ಅನುದಾನ ಕಡಿತಗೊಳಿಸಿರುವುದನ್ನು ಖಂಡಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪದಾಕಾರಿಗಳಾದ ನರ್ಮದಾ, ವರಲಕ್ಷ್ಮಿ, ಗೋಕರಮ್ಮ, ಪಾರ್ವತಿ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಶರಣಮ್ಮ, ಮಾರೆಮ್ಮ ಇದ್ದರು. 
ಜಿಲ್ಲೆ

ಐಸಿಡಿಎಸ್ ಯೋಜನೆ ಅನುದಾನ ಕಡಿತ ಸರಿಯಲ್ಲ

ರಾಚಯ್ಯ ಸ್ವಾಮಿ

ರಾಯಚೂರು: ಕೇಂದ್ರ ಸರ್ಕಾರ ಮಂಡಿಸಿದ ಮಧ್ಯಂತರ ಬಜೆಟ್‌ನಲ್ಲಿ ಐಸಿಡಿಎಸ್ ಯೋಜನೆಯ ಅನುದಾನ ಕಡಿತಗೊಳಿಸಿರುವುದು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸದಿರುವುದನ್ನು ಖಂಡಿಸಿ ಸ್ಥಳೀಯ ಅಂಬೇಡ್ಕರ್ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರದ ಪ್ರತಿಕೃತಿ ದಹನ ನಡೆಸಿ, ಐಸಿಡಿಎಸ್ ಯೋಜನೆಗೆ ಹಿಂದೆ 21521 ಕೋಟಿ ರೂ.ಗಳನ್ನು ನೀಡಲಾಗುತ್ತಿತ್ತು. ಅದನ್ನು 21200 ಕೋಟಿ ರೂ.ಗೆ ಇಳಿಕೆ ಮಾಡುವ ಮೂಲಕ 300 ಕೋಟಿ ರೂ. ಕಡಿತಗೊಳಿಸಲಾಗಿದೆ. ಇದರಿಂದ ಯೋಜನೆ ಬಲಹೀನಗೊಳಿಸಿದಂತಾಗಲಿದೆ.
ಅನುದಾನ ಕಡಿತದಿಂದ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ವೇತನ, ಬಾಡಿಗೆ ಪಾವತಿ, ಪೌಷ್ಠಿಕ ಆಹಾರಕ್ಕಾಗಿ ಹಣ ಬಿಡುಗಡೆ ನಿಗದಿತವಾಗಿ ಬಿಡುಗಡೆಯಾಗದಂತಾಗಲಿದೆ. ಹಸಿವಿನ ಸೂಚ್ಯಂಕದಿಂದ ಭಾರತವನ್ನು ಮೇಲೆತ್ತಲು ರೂಪಿಸಿರುವ ಯೋಜನೆಗೆ ಅನುದಾನ ನೀಡಿದಿರುವುದು ಸರಿಯಲ್ಲ.
ಬಜೆಟ್‌ನಲ್ಲಿ ಅನುದಾನ ಕಡಿತಗೊಳಿಸಿರುವ ಕೇಂದ್ರ ಸರ್ಕಾರದಿಂದ 2 ಕೋಟಿ ತಾಯಂದಿರು, 8 ಕೋಟಿ ಮಕ್ಕಳ ಆರೋಗ್ಯ, ಆಹಾರ, ಶಿಕ್ಷಣದ ಹಕ್ಕನ್ನು ಕಾಪಾಡಲು ಸಾಧ್ಯವಿಲ್ಲ. ಕಳೆದ ಐದು ವರ್ಷಗಳಿಂದ ಅನುದಾನ, ವೇತನ ಹೆಚ್ಚಳ ಮಾಡದೇ ಯೋಜನೆಯನ್ನು ದುರ್ಬಲಗೊಳಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಕೇಂದ್ರ ಸರ್ಕಾರ ಘೋಷಣೆ ಮಾಡಿದ ಯೋಜನೆಗಳು ಕೇವಲ ಘೋಷಣೆಯಲ್ಲಿ ಮಾತ್ರ ಉಳಿಯುತ್ತಿದ್ದು, ಸಮರ್ಪಕ ಅನುದಾನವಿಲ್ಲದೆ ಅನುಷ್ಠಾನಕ್ಕೆ ಹಿನ್ನಡೆಯಾಗುತ್ತಿದೆ. ಸರ್ಕಾರ ಕೂಡಲೇ ಐಸಿಡಿಎಸ್ ಅನುದಾನವನ್ನು ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪದಾಕಾರಿಗಳಾದ ನರ್ಮದಾ, ವರಲಕ್ಷ್ಮಿ, ಗೋಕರಮ್ಮ, ಪಾರ್ವತಿ, ಕೆ.ಜಿ.ವೀರೇಶ, ಡಿ.ಎಸ್.ಶರಣಬಸವ, ಶರಣಮ್ಮ, ಮಾರೆಮ್ಮ ಪಾಲ್ಗೊಂಡಿದ್ದರು.