ಹುಬ್ಬಳ್ಳಿ : ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಹುಬ್ಬಳ್ಳಿ ಶಾಖೆಯ ನವೀಕೃತ ಸಭಾಭವದ ಉದ್ಘಾಟನೆ ಹಾಗೂ 38ನೇ ವಾರ್ಷಿಕ ಸಮ್ಮೇಳನ ‘ಜ್ಞಾನಾಮೃತ’ ಅನ್ನು ಜು. 25ರಂದು ಬೆಳಗ್ಗೆ 9.30ಕ್ಕೆ ಇಲ್ಲಿನ ಕೇಶ್ವಾಪುರದ ಐಸಿಎಐ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಮ್ಮೇಳನದ ಅಧ್ಯಕ್ಷ ಸಿಎ ಎಸ್.ಬಿ. ಶೆಟ್ಟಿ, ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು ಎಂದು ತಿಳಿಸಿದರು.
ಚೆನೈನ ಲೆಕ್ಕ ಪರಿಶೋಧಕರ ದಕ್ಷಿಣ ಪ್ರಾಂತೀಯ ಮಹಾಸಭೆ ಅಧ್ಯಕ್ಷೆ ಸಿಎ ರೇವತಿ ಎಸ್. ರಘುನಾಥನ್, ದೆಹಲಿಯ ಐಸಿಎಐ ಹಿಂದಿನ ಅಧ್ಯಕ್ಷ ಸಿಎ ಕೆ. ರಘು, ಸಿಎ ಅನಿಕೇತ ಸುನೀಲ ತಲಾಟಿ, ಸೆಂಟ್ರಲ್ ಕೌನ್ಸಿಲ್ ಮೇಂಬರ್ಗಳಾದ ಬೆಂಗಳೂರಿನ ಸಿಎ ಮಧುಕರ ಎನ್. ಹಿರೆಗಂಗೆ, ಅಹ್ಮದಾಬಾದ್ನ ಸಿಎ ಪುರುಷೋತ್ತಮಲಾಲ ಖಾಂಡೇಲವಾಲಾ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಎರಡು ದಿನಗಳ ಈ ಸಮ್ಮೇಳನವು ನವೀಕರಿಸಿದ ಐಸಿಎಐ ಭವನದ ಸಭಾಗೃಹದಲ್ಲಿಯೇ ನಡೆಯಲಿದೆ. ನೂತನ ಭವನದಲ್ಲಿ 300ಕ್ಕೂ ಹೆಚ್ಚು ಆಸನಗಳಿದ್ದು, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಭಾಗೃಹದಲ್ಲಿ ಪ್ರತಿಧ್ವನಿ ರಹಿತ ಹಾಗೂ ದೋಷರಹಿತ ಧ್ವನಿ ವಿಸ್ತರಣೆ ವ್ಯವಸ್ಥೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ರಾಷ್ಟ್ರ ನಿರ್ಮಾಣದಲ್ಲಿ ಲೆಕ್ಕ ಪರಿಶೋಧಕರ ಪಾತ್ರ ಮತ್ತು ಅನೇಕ ಆರ್ಥಿಕ ತೆರಿಗೆ ಹಾಗೂ ತಂತ್ರಜ್ಞಾನದ ವಿಷಯಗಳ ಕುರಿತು ಒಟ್ಟು 8 ತಾಂತ್ರಿಕ ಅಧಿವೇಶನ ಮತ್ತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
25ರಂದು ಮಧ್ಯಾಹ್ನ 12.05 ರಿಂದ ಸಂಜೆ 5.30ರವರೆಗೆ ಹಾಗೂ 26ರಂದು ಬೆಳಗ್ಗೆ 10.30 ರಿಂದ ಸಂಜೆ 5.15ರವರೆಗೆ ಉಪನ್ಯಾಸ ನಡೆಯಲಿವೆ. 300ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಹುಬ್ಬಳ್ಳಿ ಶಾಖೆಯ ಅಧ್ಯಕ್ಷ ಸಿಎ ಅಕ್ಷಯಕುಮಾರ ಸಿಂಘಿ, ಸಿಎ ಮಂಜುನಾಥ ಮೇಟಿ, ಸಿಎ ವೈ.ಎಂ. ಖಟಾವಕರ ಸುದ್ದಿಗೋಷ್ಠಿಯಲ್ಲಿ ಇದ್ದರು.