ಜಿಲ್ಲೆ

ಇಬ್ರಾಹಿಂಪುರ ರಸ್ತೆ ಸಂಪರ್ಕ ಕಡಿತ

ಬಸವರಾಜ ವೀರಪ್ಪ ಗರಗ

ನವಲಗುಂದ: ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಮಳೆಯಿಂದಾಗಿ ಇಬ್ರಾಹಿಂಪುರ ಹಾಗೂ ಎಸ್.ಎಸ್. ಬಾಗಿ ಹುರಕಡ್ಲಿ ಅಜ್ಜನವರ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಅಂಬ್ಲಿ ಹಳ್ಳ ಹಾಗೂ ಅಗಸನ ಹಳ್ಳದ ಮಧ್ಯೆ ಸಿಲುಕಿಕೊಂಡು ಎರಡು ತಾಸಿಗೂ ಹೆಚ್ಚು ಕಾಲ ಪರದಾಡುವಂತಾಯಿತು.

ಶಾಲಾ ಸಮಯ ಮುಗಿದ ನಂತರ ವಿದ್ಯಾರ್ಥಿಗಳನ್ನು ಕರೆದುಕೊಂಡ ಬಂದ ಶಾಲಾ ವಾಹನ ಅಂಬಲಿ ಹಳ್ಳ ಉಕ್ಕಿ ಹರಿಯುತ್ತಿದ್ದರಿಂದ ಎರಡು ತಾಸು ನಿಲ್ಲುವಂತಾಯಿತು. ನಂತರ ಟ್ರ್ಯಾಕ್ಟರ್ ಮೂಲಕ ಹಳ್ಳ ದಾಟಿಸಲಾಯಿತು.

ಹೊಲಕ್ಕೆ ತೆರಳಿದ್ದ ಕೂಲಿ ಕಾರ್ವಿುಕರು, ರೈತರು ಎತ್ತು ಚಕ್ಕಡಿ ಸಮೇತ ಹಾಗೂ ಬೈಕ್ ಸವಾರರು ರಸ್ತೆ ಮಧ್ಯೆಯೇ ಸಮಯ ಕಳೆದರು. ಅಗಸನ ಹಳ್ಳ ಮತ್ತು ಅಂಬ್ಲಿ ಹಳ್ಳಕ್ಕೆ ಮೇಲ್ಭಾಗದಲ್ಲಿ ಮಳೆಯಾದರೆ ಈ ಎರಡು ಸೇತುವೆಗಳು ತುಂಬಿ ಹರಿಯುತ್ತವೆ. ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸಮಸ್ಯೆ ಕುರಿತು ಗೊತ್ತಿಲ್ಲ. ಮಳೆಯಿಂದಾಗಿ ಹಳ್ಳದ ನೀರು ಹೆಚ್ಚಿದೆ. ನೀರು ಕಡಿಮೆಯಾದ ನಂತರ ಪರಿಶೀಲನೆ ನಡೆಸಿ ಕ್ರಮ ಜರುಗಿಸಲು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡುತ್ತೇನೆ. | ಸುಧೀರ ಸಾಹುಕಾರ ತಹಸೀಲ್ದಾರ್ ನವಲಗುಂದ