ಜಿಲ್ಲೆ

ಎಎಸ್ ಅಧಿಕಾರಿ ಸಿ.ಶಿಖಾ ಕರ್ತವ್ಯಕ್ಕೆ ಅಡ್ಡಿ ಪ್ರಕರಣ, ಜ.18ಕ್ಕೆ ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಮೈಸೂರು: ಐಎಎಸ್ ಅಧಿಕಾರಿ ಸಿ.ಶಿಖಾ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಕುರಿತು ಶನಿವಾರ ವಿಚಾರಣೆ ನಡೆಸಿದ ನಗರದ 3ನೇ ಜೆಎಂಎಫ್ ನ್ಯಾಯಾಲಯ ತೀರ್ಪನ್ನು ಜ.18ಕ್ಕೆ ಕಾಯ್ದಿರಿಸಿದೆ.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಕೆ.ಮರೀಗೌಡ 3 ಜುಲೈ 2016 ರಂದು ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಸಿ.ಶಿಖಾ ಅವರನ್ನು ನಿಂದಿಸಿ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. 2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರಿ ಅತಿಥಿ ಗೃಹಕ್ಕೆ ಆಗಮಿಸಿದ ಸಂದರ್ಭ ಕೆ. ಮರಿಗೌಡ ಹಾಗೂ ಬೆಂಬಲಿಗರು ಆಗಮಿಸಿದ್ದರು. ಆ ಸಂದರ್ಭ ಶಿಖಾ ಅವರು ಮರಿಗೌಡ ಹಾಗೂ ಬೆಂಬಲಿಗರನ್ನು ತಡೆದ ಸಂದರ್ಭ ಮರಿಗೌಡ ಶಿಖಾ ಅವರನ್ನು ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಈ ಕುರಿತು ನಜರ್‌ಬಾದ್ ಪೊಲೀಸ್ ಠಾಣೆಗೆ ಶಿಖಾ ದೂರು ನೀಡಿದ್ದರು.

ಈ ಪ್ರಕರಣವನ್ನು ಕೈಬಿಡುವಂತೆ ಜ.2ರಂದು ಮರಿಗೌಡ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿ ಪರ ವಕೀಲರ ವಾದ ಆಲಿಸಿ ನಂತರ ವಿಶೇಷ ಸರ್ಕಾರಿ ಅಭಿಯೋಜಕರ ವಾದಕ್ಕಾಗಿ ವಿಚಾರಣೆಯನ್ನು ಜ.9ಕ್ಕೆ ಮುಂದೂಡಿ ದ್ದರು. ಜ.9 ರಂದು ಸರ್ಕಾರಿ ವಕೀಲರ ವಾದವನ್ನು ಆಲಿಸಿದ ಬಳಿಕ ನ್ಯಾಯಾಧೀಶರು ತೀರ್ಪನ್ನು ಜ.18ಕ್ಕೆ ಕಾಯ್ದಿರಿಸಿದೆ.