ಜಿಲ್ಲೆ

ನಾನು ಎಲ್ಲಿಯವರೆಗೆ ಇರುತ್ತೇನೆಯೋ ಅಲ್ಲಿಯವರೆಗೆ ಬಡವರ ಪರವಾಗಿ ಕೆಲಸ ಮಾಡುತ್ತೇನೆ : ಸಿದ್ದರಾಮಯ್ಯ

ಸದೇಶ್ ಕಾರ್ಮಾಡ್

ಮೈಸೂರು: ನಾನು ಎಲ್ಲಿಯವರೆಗೆ ಇರುತ್ತೇನೆಯೋ ಅಲ್ಲಿಯವರೆಗೆ ಬಡವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆ, ಮುಡಾ ಹಗರಣದ ತನಿಖೆ ಚುರುಕುಗೊಂಡಿರುವ ಸಂದರ್ಭದಲ್ಲಿ ಮುಖ್ಯಮಂತ್ರಿಯ ಈ ಹೇಳಿಕೆ ಎಲ್ಲರ ಕುತೂಹಲಕ್ಕೂ ಕಾರಣವಾಗಿದೆ. ವರುಣ ಕ್ಷೇತ್ರದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಯಾವುದೇ ಕಾರಣಕ್ಕೂ ದೃತಿಗೆಡುವುದಿಲ್ಲ, ಎಲ್ಲಿಯವರೆಗೆ ನಿಮ್ಮ ಆಶೀರ್ವಾದ ಇರುವುದೋ ಅಲ್ಲಿಯವರೆಗೆ ಬಿಜೆಪಿ ಹಾಗೂ ಜೆಡಿಎಸ್‌ಅನ್ನು ಎದುರಿಸುವ ಶಕ್ತಿ ಈ ಸಿದ್ದರಾಮಯ್ಯಗೆ ಇದೆ. ಅವರ ಸುಳ್ಳು ಆರೋಪಗಳಿಗೆ ಜಗ್ಗುವವನೂ ಅಲ್ಲ, ಬಗ್ಗುವವನೂ ಅಲ್ಲ. ನಿಮಗೆ ಅವರು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆಯಲ್ಲಾ ಎಂದು ಜನರನ್ನು ಪ್ರಶ್ನಿಸಿದರು.

ಸುಳ್ಳು ಆರೋಪ ಮಾಡಿ, ಅದನ್ನೇ ದೊಡ್ಡ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಸತ್ಯಕ್ಕೆ ಜಯ ದೊರೆಯುವ ವಿಶ್ವಾಸವಿದೆ. ನ್ಯಾಯಾಲಯದ ಬಗ್ಗೆ ನನಗೆ ಗೌರವ ಇದ್ದು, ನ್ಯಾಯ ದೊರೆಯುವ ನಂಬಿಕೆ ಇಟ್ಟುಕೊಂಡಿದ್ದೇನೆ. ನಾನು ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೆ ಬಡವರ ಪರವಾಗಿ ಇರುತ್ತೇನೆ. ಬಡವರಿಗೆ ನ್ಯಾಯ ಕೊಡಲು ಪ್ರಯತ್ನ ಮಾಡುತ್ತೇನೆ, ಸಾಮಾಜಿಕ ನ್ಯಾಯದ ಪರವಾಗಿ ಇರುತ್ತೇನೆ. ನಿಮಗೆ ಈ ಸಿದ್ದರಾಮಯ್ಯ ಗೌರವ ತಂದುಕೊಡುವ ಕೆಲಸ ಮಾಡುತ್ತಾನೆಯೇ ಹೊರತು ಅಗೌರವ ತಂದುಕೊಡುವ ಕೆಲಸ ಮಾಡುವುದಿಲ್ಲ ಎಂದರು.