ಹುಣಸೂರು ನಗರದ ಮಂಜುನಾಥ ಬಡಾವಣೆಯಲ್ಲಿ ಸಿಸಿ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಶ್ವೇತಾ ಮಂಜುನಾಥ್, ಸತೀಶ್‌ಕುಮಾರ್, ದೇವರಾಜ್ ಇತರರು ಇದ್ದರು. 
ಜಿಲ್ಲೆ

ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳುವೆ

ವಸಂತಕುಮಾರ್ ಬಿ

ಹುಣಸೂರು: ನಗರದ ಮಂಜುನಾಥ ಬಡಾವಣೆಯಲ್ಲಿನ ಮೂಲಸೌಕರ್ಯಗಳ ಕೊರತೆ ನೀಗಿಸಲು ಕಳೆದ 2 ವರ್ಷಗಳಲ್ಲಿ 5 ಕೋಟಿ ರೂ.ಗಳಿಗೂ ಅಧಿಕ ಅನುದಾನ ನೀಡಿದ್ದು ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ ನೀಡಿದರು.

ಬುಧವಾರ ಮಂಜುನಾಥ ಬಡಾವಣೆಯಲ್ಲಿ ರಾಜ್ಯ ವಿಪತ್ತು ಉಪಶಮನ ಅನುದಾನದಡಿ 41 ಲಕ್ಷ ರೂ.ಗಳ ವೆಚ್ಚದಡಿ ನಿರ್ಮಾಣಗೊಳ್ಳಲಿರುವ ಸಿಸಿ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಗರವ್ಯಾಪ್ತಿಯಲ್ಲಿ ಅತಿ ದೊಡ್ಡ ಬಡಾವಣೆಗಳಲ್ಲಿ ಮಂಜುನಾಥ ಬಡಾವಣೆಯೂ ಒಂದಾಗಿದ್ದು, ಈ ಬಡಾವಣೆಯಲ್ಲಿ ರಸ್ತೆ, ಚರಂಡಿ, ಯುಜಿಡಿ ಎಲ್ಲವೂ ಸಂಪೂರ್ಣವಾಗಿ ಆಗಿಲ್ಲ. ಮಳೆಗಾದಲ್ಲಿ ಇಡೀ ಬಡಾವಣೆ ದ್ವೀಪವಾಗುತ್ತಿದೆ. ಮನೆಯೊಳಗೆ ನೀರು ನುಗ್ಗಿ ನಾಗರಿಕರು ಅವಸ್ಥೆ ಪಡುತ್ತಿರುವುದು ಕಂಡಿದ್ದೇನೆ. ಕಳೆದ 20 ವರ್ಷಗಳಿಂದ ಮೂಲಸೌಕರ್ಯ ಕಲ್ಪಿಸಲು ಒತ್ತಾಯಿಸುತ್ತಲೇ ಇದ್ದೀರಿ. ನಾನು ಶಾಸಕನಾಗಿ ಕೇವಲ 2 ವರ್ಷಗಳಲ್ಲಿ 15ನೇ ಹಣಕಾಸು ಯೋಜನೆಯಡಿ 3.5 ಕೋಟಿ ರೂ. ವೆಚ್ಚದಡಿ ರಾಜಕಾಲುವೆ ನಿರ್ಮಾಣ, ಪಾರ್ಕ್ ಮತ್ತು ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ.ಗಳು ಮತ್ತು ಇದೀಗ ಮತ್ತೆ 41 ಲಕ್ಷ ರೂ.ಗಳ ಕಾಮಗಾರಿ ಆರಂಭಗೊಳ್ಳಲಿದೆ. ಹಂತಹಂತವಾಗಿ ಬಡಾವಣೆಯ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳುತ್ತೇನೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ ಮಾತನಾಡಿ, ವಿಪತ್ತು ಉಪಶಮನ ಅನುದಾದಡಿ ಎಲ್ಲ ವಾರ್ಡ್‌ಗಳಿಗೂ ಹಣ ಹಂಚಬೇಕಿತ್ತು. ಆದರೆ ಶಾಸಕರು ಎಲ್ಲ ಸದಸ್ಯರ ಮನವೊಲಿಸಿ ಮಂಜುನಾಥ ಬಡಾವಣೆಗೆ ಒಟ್ಟು ಮೊತ್ತವನ್ನು ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಸಭೆಯಲ್ಲಿ ಬಡಾವಣೆ ನಿವಾಸಿಗಳು ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಎಲ್ಲವನ್ನೂ ಪರಿಹರಿಸಿಕೊಡುವುದಾಗಿ ಶಾಸಕರು ನಿವಾಸಿಗಳನ್ನು ಸಮಾಧಾನ ಪಡಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸದಸ್ಯರಾದ ಕೃಷ್ಣರಾಜ ಗುಪ್ತ, ದೇವರಾಜ್, ಶ್ವೇತಾ ಮಂಜುನಾಥ್, ಸತೀಶ್‌ಕುಮಾರ್, ಮುಖಂಡರಾದ ಕಿರಂಗೂರು ಬಸವರಾಜು, ನಾಗರಾಜು, ಪೌರಾಯುಕ್ತೆ ಎಂ.ಮಾನಸ, ಎಇಇ ಶರ್ಮಿಳಾ, ಎಇ ಲೋಕೇಶ್, ಶಿವಕುಮಾರ್ ಸೇರಿದಂತೆ ಸಿಬ್ಬಂದಿ ಮತ್ತು ನಿವಾಸಿಗಳು ಹಾಜರಿದ್ದರು.