ಆನವಟ್ಟಿ: ಜೋಗಿ ಸಮಾಜದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಡಾ. ಎಚ್.ಸಿ.ಮಹದೇವಪ್ಪ ಅವರೊಂದಿಗೆ ಮಾತನಾಡುತ್ತೇನೆ ಎಂದು ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃಧಿ ಮಹಾಮಂಡಳಿಯಿಂದ ಶಾಸಕರು, ಸಚಿವರು ಹಾಗೂ ಸಂಸದರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಸಮಾಜ ಕೂಡ 1950-51ರಲ್ಲಿ ಅತ್ಯಂತ ಹೀನಾಯ ಸ್ಥಿತಿಯಲ್ಲಿ ಇತ್ತು. 1952ರಿಂದ 1972ರ ಅವಧಿಯಲ್ಲಿ ಗೇಣಿದಾರರಾಗಿ ಗುಲಾಮರ ಸ್ಥಿತಿಯಲ್ಲಿ ದೀವರ ಸಮಾಜ ಇತ್ತು ಎಂದರು.
1972ರಲ್ಲಿ ನಾನು ಶಾಸಕನಾದೆ. ಆಗ ಬಂಗಾರಪ್ಪ ಅವರೂ ಶಾಸಕರಾಗಿದ್ದರು. ಬಡವರಿಗೆ ಭೂಮಿ ನೀಡಲು ಬಂಗಾರಪ್ಪ ಹಾಗೂ ನಾನು ಕೈಜೋಡಿಸಿದೆವು. ಆಗ ದೇವರಾಜ ಅರಸು ಗೇಣಿ ಪದ್ಧತಿಯನ್ನು ಕಡೆಗಣಿಸಿ ಉಳುವವನಿಗೆ ಭೂಮಿ ಸಿಗಬೇಕು ಎಂಬ ಗಟ್ಟಿ ನಿಲು ತಾಳಿದ್ದರಿಂದ ಸಾಕಷ್ಟು ಬಡವರಿಗೆ ಭೂಮಿ ದೊರೆಯಿತು. ಜೋಗಿ ಸಮಾಜದವರಿಗೆ ಭೂಮಿ ಬಹಳ ಕಡಿಮೆ. ಹಾಗಾಗಿ ಸರ್ಕಾರದಿಂದ ಈ ಸಮಾಜಕ್ಕೆ ನ್ಯಾಯ ದೊರಕಿಸಿ ಕೂಡಲು ನಾನು ಪ್ರಯತ್ನಿಸುತ್ತೇನೆ ಎಂದ ಅವರು, ಸಮಾರಂಭಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಠಾಧೀಶರಾದ ಶ್ರೀ ಯೋಗಿ ನಿವೃತ್ತಿನಾಥಜೀ ಮಾತನಾಡಿ, ಈ ಸಮಾರಂಭದಲ್ಲಿ ಜೋಗಿ ಸಮಾಜವನ್ನು ಜನಪ್ರತಿನಿಧಿಗಳು ಕಡೆಗಣಿಸಿರಬಹುದು. ಇದರಿಂದ ಸಮಾಜ ದೃತಿಗೆಡುವ ಅವಶ್ಯಕತೆಯಿಲ್ಲ. ಹಿಂದೆ ಆಗಿರುವ ಕಾರ್ಯಕ್ರಮಗಳು ಹೋರಾಟಗಳು ಸಂಘಟನೆಯ ಮೆಟ್ಟಿಲುಗಳು. ಜೋಗಿ ಸಮಾಜಕ್ಕೆ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಿಗುವವವರೆಗೂ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಗಳನ್ನು ಹಮ್ಮಿಕೊಳ್ಳಲಾಗುವುದು. ಇಂದಿನಿಂದಲ್ಲೇ ಸಮಾಜದ ಪ್ರತಿಯೊಬ್ಬರೂ ಹೋರಾಟಕ್ಕೆ ಸಜ್ಜುಗೊಳ್ಳಬೇಕು ಎಂದು ಹೇಳಿದರು.
ಜೋಗಿ ಸಮಾಜದ ರಾಜ್ಯ ಅಧ್ಯಕ್ಷ ಶಿವಾಜಿ ಡಿ.ಮಧುರ್‌ಕರ್ ಮಾತನಾಡಿ, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಜೋಗಿ ಸಮಾಜದ ಸ್ಥಿತಿಗತಿ ಕುರಿತು ಕುಲಶಾಸ್ತ್ರೀಯ ಅಧ್ಯಯನ ಮಾಡಿಸಲಾಗಿತ್ತು. ಪ್ರೊ. ಶ್ರೀನಿವಾಸ ಗೌಡ ಅವರು ಸರ್ಕಾರಕ್ಕೆ ನೀಡಿರುವ ವರದಿಯನ್ನು ಅನುಷ್ಠಾನಕ್ಕೆ ತರಬೇಕು. ಹಂದಿಜೋಗಿ ಸಮಾಜ ಎಸ್ಸಿ ಪಟ್ಟಿಯಲ್ಲಿ ಇದೆ. ಉಳಿದ ಜೋಗಿ ಒಳಪಂಡಗಳು ಆಚಾರ-ವಿಚಾರ, ಧಾರ್ಮಿಕತೆ ಒಂದೇ ಆಗಿದ್ದು. ಎಲ್ಲ ಜೋಗಿ ಪಂಗಡಗಳನ್ನು ಎಸ್ಸಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಪರ್‌ಬಳ್ಕರ್ ಮಾತನಾಡಿ, ಒಂದು ತಿಂಗಳಿಂದ ರಾಜ್ಯದ ತುಂಬ ತಿರುಗಾಡಿ ಜೋಗಿ ಸಮಾಜದ ಎಲ್ಲ ಒಳಪಂಡಗಳನ್ನು ಸಂಘಟಿಸಿ ಸಮಾರಂಭಕ್ಕೆ ಜನರನ್ನು ಸೇರಿಸಿದ್ದೇವೆ. ಆದರೆ ಸನ್ಮಾನಿತ ಶಾಸಕರು, ಸಚಿವರು, ಹಾಗೂ ಸಂಸದರು ಕಾರ್ಯಕ್ರಮಕ್ಕೆ ಬಾರದೆ ತಬ್ಬಲಿ ಸಮಾಜವನ್ನು ಕಡೆಗಣಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾರುತಿ ಜೋಗಿ, ಯಲ್ಲಪ್ಪ ಜೋಗಿ, ಕಾಂಗ್ರೆಸ್ ಮುಖಂಡ ಚೌಟಿ ಚಂದ್ರಶೇಖರ್ ಪಾಟೀಲ್, ಹೊಳೆಲಿಂಗಪ್ಪ ಚೌಹಾಣ್, ಎನ್.ಅಶೋಕ್ ಜೋಗಿ, ಗುಡ್ಡಪ್ಪ ಜೋಗಿ, ಆನಂದಪ್ಪ ಬಟ್ಟೆಮಲ್ಲಪ್ಪ ಜೋಗಿ, ಶಿವರುದ್ರಪ್ಪ ಜೋಗಿ ಗೆಂಡ್ಲಹೊಸೂರು, ಬಸವರಾಜ್ ಚೌಹಾಣ್, ನಿಂಗಪ್ಪ ಜೋಗಿ ಹುರುಳಿ ಇದ್ದರು.