ಜಿಲ್ಲೆ

ಪರಿಷತ್ ಚುನಾವಣೆ ಸೋಲಿನ ಹೊಣೆ ಹೊರುತ್ತೇನೆ : ಮರಿತಿಬ್ಬೇಗೌಡ

ಮೈಸೂರು: ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರು ಆಮಿಷೆಗೆ ಒಳಗಾದರೇ ಅಥವಾ ಇಲ್ಲವೇ ಎಂಬುದನ್ನು ಸಮಾಜ ಹಾಗೂ ಮಾಧ್ಯಮ ನಿರ್ಧರಿಸಬೇಕು ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಹೇಳಿದರು.

ಮತದಾರರು ಆಮಿಷೆಗೆ ಒಳಗಾಗಿರುವ ವಿಚಾರದ ಕುರಿತು ನಾನು ಪ್ರತಿಕ್ರಿಯಿಸಲು ಬಯಸುವುದಿಲ್ಲ. ಚುನಾವಣೆ ವೇಳೆ ಹಣ ಹಂಚಿಕೆ ನಡೆದಿರುವ ಆರೋಪ ಕುರಿತು ಕ್ರಮ ಕೈಗೊಳ್ಳುವುದು ಚುನಾವಣಾ ಆಯೋಗಕ್ಕೆ ಬಿಟ್ಟ ವಿಚಾರ. ನಾನು ಈ ಬಗ್ಗೆ ಮಾತನಾಡಿದರೆ ಸೋಲುಂಡ ಕಾರಣಕ್ಕೆ ಈ ರೀತಿ ಮಾತನಾಡುತ್ತಿದ್ದೇನೆ ಅನ್ನುತ್ತಾರೆ. ಹಾಗಾಗಿ ಆ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಬಾರಿ ನನ್ನ ಮೇಲೆ ನಂಬಿಕೆ ಇಟ್ಟು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಕೆಟ್ ನೀಡಿದರು. ಆದರೆ, ನನಗೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಈ ಸೋಲಿನ ಹೊಣೆಯನ್ನು ನಾನು ಹೋರುತ್ತೇನೆ ಎಂದು ಹೇಳಿದರು.

ಈ ಬಾರಿ ನಾನು ಗೆಲ್ಲುವ ಭರವಸೆ ಪಕ್ಷಕ್ಕೆ ಇತ್ತು. ಈ ಕ್ಷೇತ್ರದಲ್ಲಿ ಶಿಕ್ಷಕರು ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದರು. ಅವರ ಪರವಾಗಿ ಸದನದಲ್ಲಿ ಹೋರಾಡಿ ನ್ಯಾಯ ಕೊಡಿಸಿದೆ. ಅಲ್ಲದೆ, ಈ ಬಾರಿ ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದು, ಶಿಕ್ಷಕರ ಸಮಸ್ಯೆ ಗಳನ್ನು ಪರಿಹರಿಸಲು ನನಗೆ ಮತ್ತಷ್ಟು ಸಹಕಾರಿ ಆಗುತಿತ್ತು. ಆದರೆ, ನನಗೆ ಸೋಲುಂಟಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಈ ಭಾಗದ ಮುಖ್ಯಮಂತ್ರಿ ಇದ್ದಾಗ ಶಿಕ್ಷಕರು ಈ ಬಾರಿ ನನಗೆ ಆಶಿರ್ವಾದ ಮಾಡಿಲ್ಲ ಎಂಬ ವಿಚಾರದಲ್ಲಿ ಬೇಸರವಿಲ್ಲ. ನಾನು ಸೋಲು ಅನುಭವಿಸಿದರೂ ಸೋಲಿನಿಂದ ಧೃತಿಗೆಡದೆ ಶಿಕ್ಷಕ ಸಮುದಾಯದ ಪರವಾಗಿ ಮುಂದಿನ ದಿನಗಳಲ್ಲೂ ನಿರಂತರವಾಗಿ ಕೆಲಸ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ನಾನು ಸಾಮಾನ್ಯ ಕಾರ್ಯಕರ್ತನಂತೆ ಕಾರ್ಯನಿರ್ವಹಿಸಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇನೆ. ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಯ ಶಿಕ್ಷಕರು ನನ್ನೊಡನೆ ಇದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ ಕುಮಾರ್, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್, ನಗರಾಧ್ಯಕ್ಷ ಆರ್. ಮೂರ್ತಿ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಪಕ್ಷದ ಮುಖಂಡ ಉತ್ತನಹಳ್ಳಿ ಶಿವಣ್ಣ ಇದ್ದರು.