ಜಿಲ್ಲೆ

ತಪ್ಪು ಮಾಹಿತಿ ಕೊಟ್ಟಿದ್ದರೆ ರಾಜೀನಾಮೆ ಕೊಡುವೆ

ವೀರೇಶ ಸೌದ್ರಿ

ಬೆಂಗಳೂರು: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯವು ಆರ್ಥಿಕ ದುಸ್ಥಿತಿಯಿಂದ ಕಂಗೆಟ್ಟಿದೆ. ಕಳೆದ 5-6 ವರ್ಷದಿಂದ ವೇತನ ಮತ್ತು ನಿವೃತ್ತಿ ವೇತನ ಕೊಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರಿಯಾದ ಮಾಹಿತಿ ಒದಗಿಸುವಂತೆ ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ. ಸಂಕನೂರ ಆಗ್ರಹಿಸಿದರು.

ಇದಕ್ಕೆ ಸದನದಲ್ಲಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ, ಮೂರು ವರ್ಷದಲ್ಲಿ ವಿಶ್ವವಿದ್ಯಾಲಯಕ್ಕೆ ಕೊಟ್ಟ ಅನುದಾನದ ಮಾಹಿತಿ ನೀಡಿದರು.

ಇದಕ್ಕೆ ತಿರುಗೇಟು ನೀಡಿದ ಸಂಕನೂರ, ನಿಮಗೆ ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟಿದ್ದಾರೆ. ಸಿಬ್ಬಂದಿ ವೇತನ ಹಾಗೂ ನಿವೃತ್ತಿ ಸೇರಿ ಒಟ್ಟು 151,14,58,526 ರೂ. ಅಗತ್ಯವಿದೆ. ಪೂರ್ಣ ಪ್ರಮಾಣದಲ್ಲಿ ಅನುದಾನ ಕೊಡದೇ ಆಂತರಿಕ ಅನುದಾನ ಬಳಸಿಕೊಳ್ಳುವಂತೆ ಹೇಳಿ ಸಾಗಹಾಕಲಾಗುತ್ತಿದೆ. ಸರ್ಕಾರವೇ ಅನುದಾನ ಬಿಡುಗಡೆ ಮಾಡಬೇಕು. ನಾನು ತಪ್ಪು ಮಾಹಿತಿ ಕೊಟ್ಟಿದ್ದರೆ ಈಗಲೇ ರಾಜೀನಾಮೆ ನೀಡುವೆ ಎಂದರು.

ಆರ್ಥಿಕ ವ್ಯವಸ್ಥೆ ಕೆಟ್ಟು ಹೋಗಿರುವುದರಿಂದ ಬರೀ ಪ್ರತಿಭಟನೆಗಳು ನಡೆಯುತ್ತಿವೆ. ಸಂಶೋಧನೆಗಳೂ ನಡೆಯುತ್ತಿಲ್ಲ. ಹೀಗೆ ಮುಂದುವರಿದರೆ 2-3 ವರ್ಷದಲ್ಲಿ ವಿಶ್ವವಿದ್ಯಾಲಯದ ಬಾಗಿಲು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕುಲಪತಿಗಳು, ಹಣಕಾಸು ಇಲಾಖೆಯ ಸಭೆ ಕರೆದು ಆಗಿರುವ ಸಮಸ್ಯೆ ಕುರಿತು ಚರ್ಚಿಸಿ, ಅನುದಾನ ಮಂಜೂರು ಮಾಡಬೇಕು ಎಂದು ಸಂಕನೂರು ಆಗ್ರಹಿಸಿದರು. ಸಚಿವರು ಭರವಸೆ ನೀಡಿದರು.