ಮೈಸೂರು: ನನ್ನ ಆತ್ಮಸಾಕ್ಷಿ ಸರಿಯಾಗಿದೆ. ಹೀಗಾಗಿ ನಾನು ಹೆದರುವ, ಜಗ್ಗುವ-ಬಗ್ಗುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಹಾಗೂ ಜೆಡಿಎಸ್‌ಗೆ ನೇರ ತೊಡೆತಟ್ಟಿ ಹೇಳಿದರು.
ಅಶೋಕಪುರಂನಲ್ಲಿ ಭಾನುವಾರ 245 ವೀಳ್ಯದೆಲೆ ಬೆಳೆಗಾರರಿಗೆ ತಲಾ 0.5 ಗುಂಟೆ ಜಾಗ ಹಂಚಿಕೆ ಹಾಗೂ ದೊಡ್ಡಗರಡಿ, ಚಿಕ್ಕಗರಡಿ ಆವರಣಗಳಲ್ಲಿ ವ್ಯಾಯಾಮ ಶಾಲೆ, ಸಭಾಭವನ, ವಾಣಿಜ್ಯ ಸಂಕೀರ್ಣ ನಿರ್ಮಾಣ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಜನರ ಆಶೀರ್ವಾದ, ನಿಮ್ಮೆಲ್ಲರ ಬೆಂಬಲ ಇರುವವರೆಗೂ ನಾನು ಅಲ್ಲಾಡುವುದಿಲ್ಲ. ಬಹಳ ಜನ ಬಂದು ಬಂದು ನನಗೆ ಧೈರ್ಯವಾಗಿರಿ, ರಾಜೀನಾಮೆ ಕೊಡಬೇಡಿ ಅನ್ನುತ್ತಿದ್ದಾರೆ. ನಾನು ಇದಕ್ಕೆಲ್ಲ ಹೆದರುವವನೇ ಅಲ್ಲ. ರಾಜಕೀಯವಾಗಿ ನನಗೆ ಒಂದೆರಡು ತಿಂಗಳು ತೊಂದರೆ ಕೊಡಬಹುದು. ಆದರೆ ಕಾನೂನಾತ್ಮಕವಾಗಿ ನಾನು ಗೆದ್ದೇ ಗೆಲ್ಲುತ್ತೇನೆ. ರಾಜಕೀಯವಾಗಿ ಇದನ್ನೆಲ್ಲ ಎದುರಿಸಿ ನಿಲ್ಲೋದು ನನಗೆ ಗೊತ್ತಿದೆ ಎಂದರು.