ತೀರ್ಥಹಳ್ಳಿ: ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಧಿಕಾರವಧಿಯಲ್ಲಿ ಜಾರಿಗೆ ತರಲಾಗಿದ್ದ ಆಶ್ರಯ, ಆರಾಧನಾ ಮುಂತಾದ ಯೋಜನೆಗಳು ಇಂದಿಗೂ ಬಡವರ ಮನಸ್ಸಿನಲ್ಲಿ ಶಾಶ್ವತವಾಗಿ ಬೇರೂರಿವೆ. ದೇವರಾಜ ಅರಸು ನಂತರದಲ್ಲಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಶ್ರಮಿಸಿದವರು ಬಂಗಾರಪ್ಪ. ಅವರು ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ಹಣಗೆರೆಕಟ್ಟೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಬಂಗಾರಪ್ಪ ಅವರು ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ ರೈತರ ಬದುಕಿಗೆ ನೆರವಾಗಿದ್ದರು. ಬಡವರಿಗೆ ಸೂರು ಕಲ್ಪಿಸುವ ಆಶ್ರಯ, ಗ್ರಾಮೀಣ ಭಾಗದ ಯುವಕರ ಭವಿಷ್ಯಕ್ಕೆ ಪೂರಕವಾದ ಗ್ರಾಮೀಣ ಕೃಪಾಂಕ ಮುಂತಾದ ಯೋಜನೆಗಳು ಇಂದಿಗೂ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿವೆ ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಂವಿಧಾನವನ್ನು ಬದಲಾಯಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬಿಜೆಪಿ ಬುಡಮೇಲು ಮಾಡಲು ಹೊರಟಿದೆ. ಕೆಲವೇ ಉದ್ಯಮಿಗಳ ಲಕ್ಷಾಂತರ ಕೋಟಿ ರೂ. ಸಾಲವನ್ನು ಮನ್ನಾ ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಪರವಾಗಿ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ ಮೂರು ಅವಧಿಗೆ ಸಂಸತ್ ಸದಸ್ಯರಾಗಿದ್ದರೂ ಮಲೆನಾಡಿನ ರೈತರ ಸಮಸ್ಯೆ ಸೇರಿದಂತೆ ಮೊಬೈಲ್ ಸಿಗ್ನಲ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ ಎಂಸು ದೂರಿದರು.
ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ನಟ ಶಿವರಾಜ್‌ಕುಮಾರ್, ಪ್ರಮುಖರಾದ ಮುಡುಬಾ ರಾಘವೇಂದ್ರ, ರಾಘವೇಂದ್ರ ಪುಟ್ಟೋಡ್ಲು, ಕೆರೆಹಳ್ಳಿ ರಾಮಪ್ಪ, ಸುರೇಶ್ ಕಲ್ಲುಕೊಪ್ಪ ಇತರರಿದ್ದರು.