ಶಾಸಕ ಆರಗ ಜ್ಞಾನೇಂದ್ರ ಭೇಟಿಯಾದ ಹಾದಿಗಲ್ಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ವಸಂತಿ ಶ್ರೀನಿವಾಸ್.  
ಜಿಲ್ಲೆ

ನಾನು ಬಿಜೆಪಿಯಲ್ಲೇ ಮುಂದುವರಿಯುವೆ: ಹಾದಿಗಲ್ಲು ಗ್ರಾಪಂ ಅಧ್ಯಕ್ಷೆ ವಸಂತಿ

Shivamogga - Desk - Vinayakumar D B

ತೀರ್ಥಹಳ್ಳಿ: ಹಾದಿಗಲ್ಲು ಗ್ರಾಪಂಗೆ ಮಂಗಳವಾರ ಕಾಂಗ್ರೆಸ್ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ವಸಂತಿ ಶ್ರೀನಿವಾಸ್ ನಾನು ಬಿಜೆಪಿ ಬೆಂಬಲಿತಳಾಗಿಯೇ ಸ್ಪರ್ಧಿಸಿದ್ದು ಈಗಲೂ ಪಕ್ಷದಲ್ಲಿಯೇ ಮುಂದುವರಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಈ ಬೆಳವಣಿಗೆ ಗ್ರಾಪಂಯಲ್ಲಿರುವ ಬಿಜೆಪಿ ಸದಸ್ಯರ ನಡುವಿನ ಭಿನ್ನಾಭಿಪ್ರಾಯ ಸ್ಫೋಟಗೊಂಡಿರುವುದಕ್ಕೆ ಸಾಕ್ಷಿಯಾಗಿದ್ದು ಮಾತ್ರವಲ್ಲದೇ ಕುತೂಹಲವನ್ನೂ ಮೂಡಿಸಿದೆ.

ಕುತೂಹಲದ ಸಂಗತಿಯೆಂದರೆ ವಸಂತಿ ಶ್ರೀನಿವಾಸ್ ಅವರ ವಿರುದ್ಧ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶ್ವೇತಾ ಮಾತ್ರವಲ್ಲದೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನವೀನ್ ಕುಮಾರ್ ಕೂಡ ಬಿಜೆಪಿ ಬೆಂಬಲಿತರಾಗಿಯೇ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಸಲ್ಲಿಸಿದ ನಂತರ ಶ್ವೇತಾ ಮತ್ತು ನವೀನ್‌ಕುಮಾರ್ ಅವರು ಇನ್ನೂ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರೊಂದಿಗೆ ಚುನಾವಣೆಯನ್ನು ಬಹಿಷ್ಕರಿಸಿ ಹೊರ ನಡೆದಿದ್ದರು. 8 ಸದಸ್ಯ ಬಲದ ಈ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಭ್ಯರ್ಥಿಗಳೂ ಸೇರಿ ನಾಲ್ಕು ಮಂದಿ ಮಾತ್ರ ಭಾಗಿಯಾಗಿದ್ದರು.
ಅಧ್ಯಕ್ಷರಾಗಿ ಚುನಾಯಿತರಾಗಿದ್ದ ವಸಂತಿ ಶ್ರೀನಿವಾಸ್ ಬುಧವಾರ ಶಾಸಕ ಆರಗ ಜ್ಞಾನೇಂದ್ರ ಅವರನ್ನು ಗುಡ್ಡೇಕೊಪ್ಪದ ಅವರ ನಿವಾಸದಲ್ಲಿ ಭೇಟಿ ಮಾಡಿ ನಾನು ಬಿಜೆಪಿಯಲ್ಲೇ ಮುಂದುವರಿಯುವುದಾಗಿ ಶಾಸಕರಿಗೆ ಸ್ಪಷ್ಟಪಡಿಸಿದರು. ಬಿಜೆಪಿ ಸದಸ್ಯರ ನಡುವಿನ ಸಂಘರ್ಷದಲ್ಲಿ ಕಾಂಗ್ರೆಸಿಗೆ ಲಾಭವಾಗಿದ್ದು ಕೇವಲ ಎರಡು ಸ್ಥಾನಗಳನ್ನು ಹೊಂದಿರುವ ಪಕ್ಷದ ಹೊಸ್ಕೇರಿ ರವಿಕುಮಾರ್ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ನಮ್ಮ ಭಾಗದ ಜನರ ಒತ್ತಾಯಕ್ಕೆ ಮಣಿದು ಕಾಂಗ್ರೆಸ್ ಬೆಂಬಲದಿಂದ ಗೆದ್ದಿದ್ದೇನೆ. ಅಧಿಕಾರವನ್ನು ಹಂಚಿಕೊಳ್ಳಲು ನಾನು ಸಿದ್ಧಳಾಗಿದ್ದರೂ ಉಳಿದ ಸದಸ್ಯರಿಂದ ಬೆಂಬಲ ದೊರೆತಿರಲಿಲ್ಲ ಎಂದು ಅಧ್ಯಕ್ಷೆ ಹೇಳಿದರು. ಈ ಚುನಾವಣೆಯಲ್ಲಿ ಸಕ್ರಿಯರಾಗಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ ಶೆಟ್ಟಿ, ಅಧ್ಯಕ್ಷರ ಯೂ ಟರ್ನ್ ಹೇಳಿಕೆ ಆಶ್ಚರ್ಯ ತಂದಿದೆ. ಶಾಸಕರ ಭಯದಿಂದ ಅಧ್ಯಕ್ಷರು ಹಾಗೆ ಹೇಳಿರುವ ಸಾಧ್ಯತೆ ಇದೆ ಎಂದಿದ್ದಾರೆ.