ಜಿಲ್ಲೆ

ಕೊಟ್ಟ ಭರವಸೆಯಂತೆ ನಡೆದುಕೊಳ್ಳುವೆ

ಮರಿದೇವ ಹೂಗಾರ

ಹುಬ್ಬಳ್ಳಿ: ಚುನಾವಣೆಯಲ್ಲಿ ನನ್ನ ಪರವಾಗಿ ಮತ ಕೇಳಿ, ನೀವು ತಲೆ ತಗ್ಗಿಸುವಂತಹ ಕೆಲಸ ನಾನು ಯಾವತ್ತೂ ಮಾಡಲ್ಲ. 2004ರಲ್ಲಿ ಈ ಭರವಸೆ ಕೊಟ್ಟಿದ್ದೆ. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ ನೀಡಿದರು.

ಇಲ್ಲಿನ ದೇಶಪಾಂಡೆನಗರದ ಬಿಜೆಪಿ ಕಚೇರಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಪ್ರಚಾರದ ಕಾರ್ಯಾಲಯ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೆಚ್ಚು ಕೆಲಸ ಆಗಿವೆ. ಈ ದೇಶದ ಆಗು ಹೋಗುಗಳಲ್ಲಿ ಭಾಗವಹಿಸಲು ನಿಮ್ಮೆಲ್ಲರ ಆಶೀರ್ವಾದ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಟ್ರಿಬಲ್ ತಲಾಖ್, ಶೇ. 33ರಷ್ಟು ಮಹಿಳಾ ಮೀಸಲಾತಿ, 370 ಕಾಯ್ದೆ ರದ್ದು ತೀರ್ವನದಲ್ಲಿ ಭಾಗವಹಿಸಿದ್ದೇನೆ. ಇದೆಲ್ಲ ನಿಮ್ಮೆಲ್ಲರ ಆಶೀರ್ವಾದದಿಂದ ಆಗಿದೆ. ಅದೇ ರೀತಿ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಿದೆ ಎಂದರು.

ಅತ್ಯಂತ ಖುಷಿಯಿಂದ ಲೋಕಸಭಾ ಕಚೇರಿ ಉದ್ಘಾಟಿಸಿದ್ದೇನೆ. ನಮ್ಮ ಹೊಸ ಕಚೇರಿ ರೆಡಿಯಾಗಿದೆ. ಈ ಕಾರ್ಯಾಲಯದಿಂದ ಪ್ರಚಾರ ಆರಂಭಿಸಿದವರೆಲ್ಲರೂ ಚುನಾವಣೆಯಲ್ಲಿ ಗೆದ್ದಿದ್ದಾರೆ. ಹೀಗಾಗಿ 2024ರ ಚುನಾವಣೆಯನ್ನೂ ಇದೇ ಕಚೇರಿಯಿಂದ ಮಾಡಲು ತೀರ್ವನಿಸಿದ್ದೇನೆ. ಮತ್ತೊಮ್ಮೆ ಆಶೀರ್ವದಿಸಿ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಸಂಚಾಲಕ ಎಂ. ನಾಗರಾಜ ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಚುನಾವಣೆ ಭಿನ್ನವಾಗಿದೆ. ಪ್ರತಿ ಮತಗಟ್ಟೆಗೆ 370 ಹೆಚ್ಚುವರಿ ಮತ ಪಡೆದು, ಮೂರು ಲಕ್ಷ ಮತಗಳ ಅಂತರದ ಗೆಲವು ದಾಖಲಿಸಬೇಕು. ಇದಕ್ಕೆ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.

ವಿಧಾನಸಭೆ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಮಾತನಾಡಿ, ಎಲ್ಲ ಚುನಾವಣೆಗಳಿಗಿಂತ ಹೆಚ್ಚಿನ ಲೀಡ್​ನಿಂದ ಜೋಶಿ ಈ ಬಾರಿ ಆಯ್ಕೆಯಾಗಲಿದ್ದಾರೆ. ಕ್ಷೇತ್ರದ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಅವರಿಗಿದೆ. ರಸ್ತೆ, ಶಾಲೆ, ರೈತ ಪರ ಕೆಲಸ ಮಾಡಿದ್ದಾರೆ. ಇದು ದೇಶದ ಚುನಾವಣೆ, ದೇಶದ ಅಭಿವೃದ್ಧಿಗೆ ಮೋದಿ ಅವರು ಇರಬೇಕು ಎಂದು ಹೇಳಿದರು.

ಕುಂದಗೋಳ ಶಾಸಕ ಎಂ.ಆರ್. ಪಾಟೀಲ ಮಾತನಾಡಿ, ಧಾರವಾಡದಲ್ಲಿ ಈ ಹಿಂದಿಗಿಂತ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಆಯ್ಕೆಯಾಗಲಿದೆ. ಜೋಶಿ ಕೇವಲ ರಾಜಕೀಯ ಮಾಡದೆ, ಎಲ್ಲ ಸಮಾಜದ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ತರುವಲ್ಲಿ ಜೋಶಿ ಅವರು ಪ್ರಯತ್ನಿಸಿ ಯಶಸ್ವಿಯೂ ಆಗಿದ್ದಾರೆ. ನಾಯಕರಾದವರಿಗೆ ಗುರಿ ಇರಬೇಕು ಎನ್ನುವುದನ್ನು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.

ಮಾಜಿ ಶಾಸಕ ಅಶೋಕ ಕಾಟವೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ತಿಪ್ಪಣ್ಣ ಮಜ್ಜಗಿ, ನಿಂಗಪ್ಪ ಸುತಗಟ್ಟಿ, ಪ್ರಮುಖರಾದ ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ರವಿ ನಾಯಕ ಇತರರು ಭಾಗವಹಿಸಿದ್ದರು.