ಜಿಲ್ಲೆ

ಐ-ಫೋನ್ ಆಸೆಗೆ 90 ಸಾವಿರ ಕಳೆದುಕೊಂಡ ವಿದ್ಯಾರ್ಥಿನಿ

ಶಿವಮೊಗ್ಗ: ಕಡಿಮೆ ಬೆಲೆಗೆ ದುಬಾರಿ ಐ-ಫೋನ್ ಸಿಕ್ಕರೆ ಯಾರು ಬೇಡವೆನ್ನುತ್ತಾರೆ ಹೇಳಿ..

ಶಿವಮೊಗ್ಗದಲ್ಲೂ ಪದವಿ ವಿದ್ಯಾರ್ಥಿನಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶ ನಂಬಿ ಕಡಿಮೆ ಬೆಲೆಗೆ ಐ-ಫೋನ್ ಖರೀದಿಸಲು ಹೋಗಿ ಬರೋಬ್ಬರಿ 90 ಸಾವಿರ ರೂ. ಕಳೆದುಕೊಂಡಿದ್ದಾಳೆ. sanskari_guy_m ಹೆಸರಿನ ಇನ್‌ಸ್ಟಾಗ್ರಾಂನಲ್ಲಿ ದುಬಾರಿ ಐ-ಫೋನ್‌ಗಳನ್ನು ಕಡಿಮೆ ಬೆಲೆಯಲ್ಲಿ ತರಿಸಿಕೊಡಲಾಗುತ್ತದೆ ಎಂಬ ಸಂದೇಶ ನಂಬಿದ 21 ವರ್ಷದ ವಿದ್ಯಾರ್ಥಿನಿ ವಂಚಕ ಕಳುಹಿಸಿದ ಬ್ಯಾಂಕ್ ಖಾತೆಗೆ ಮೇ 24ರಂದು ಎಟಿಎಂನಿಂದ 47 ಸಾವಿರ ರೂ. ಮತ್ತು ಸ್ನೇಹಿತನಿಂದ ಪೇಟಿಎಂ ಮೂಲಕ 43 ಸಾವಿರ ರೂ. ಹಾಕಿಸಿದ್ದಳು.

ಬಳಿಕ ಕರೆ ಮಾಡಿದ್ದ ವಂಚಕ ಬ್ಯಾಂಕ್ ಖಾತೆಗೆ ಹಣ ಜಮಾ ಆಗದ್ದು ಜೂ.7ರಂದು ಅಮೆರಿಕಾದಿಂದ ಐ-ಫೋನ್ ತರಿಸಿಕೊಡುವುದಾಗಿ ಹೇಳಿದ್ದ. ಹಲವು ದಿನಗಳವರೆಗೆ ತರಿಸಿಕೊಡುವುದಾಗಿ ಸತಾಯಿಸಿದ್ದ. ಅನುಮಾನಗೊಂಡು ಹಣ ವಾಪಸ್ ಕೇಳಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಮೋಸ ಹೋಗಿರುವುದು ಅರಿವಾದ ವಿದ್ಯಾರ್ಥಿನಿ ಇದೀಗ ಸೈಬರ್ ಠಾಣೆ ಮೊರೆ ಹೋಗಿದ್ದಾರೆ.