ಮೈಸೂರು: ದೈವದ ಅನುಮತಿ ಪಡೆದೇ ನಾನು ಕಾಂತಾರ ಸಿನಿಮಾ ಮಾಡಿದ್ದೇನೆ. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ ಎಂದು ನಟ ರಿಷಬ್ ಶೆಟ್ಟಿ ಹೇಳಿದರು.
ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕಾಂತಾರ ಸಿನಿಮಾಗೆ ದೈವಾರಾಧಕರ ವಿರೋಧದ ಕುರಿತು ಪ್ರತಿಕ್ರಿಯಿಸಿದ ಅವರು, ಯಾರು ಏನು ಬೇಕಾದರೂ ಮಾತನಾಡಲಿ. ದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಇಡೀ ತಂಡದ ಮೇಲೆ ದೈವದ ಆಶೀರ್ವಾದ ಇದೆ. ನಾನು ದೈವವನ್ನು ನಂಬುತ್ತೇನೆ, ಆರಾಧನೆ ಮಾಡುತ್ತೇನೆ. ಎಲ್ಲಿಯೂ ತಪ್ಪುಗಳು ಆಗದಂತೆ ಹಿರಿಯರ ಮಾರ್ಗದರ್ಶನ ಪಡೆದು ಸಿನಿಮಾ ಮಾಡಿದ್ದೇನೆ. ಸಿನಿಮಾ ನೋಡಿದವರು ದೈವದ ರೀತಿಯಲ್ಲಿ ನೃತ್ಯ ಮಾಡುವುದು ಸರಿಯಲ್ಲ.ಯಾರು ಕೂಡ ದೈವದ ರೀತಿ ನಟನೆ ಮಾಡಬಾರದು. ನಾವು ಶ್ರದ್ಧೆ ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಇದರಿಂದ ನನಗೂ ಸಹ ಬೇಜಾರಾಗುತ್ತದೆ. ಯಾರು ಸಹ ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದರು.
ಕುಂದಾಪುರದ ಕೆರಾಡಿ ಎಂಬ ಸಣ್ಣ ಗ್ರಾಮದಿಂದ ಬಂದ ನಾನು ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದೇನೆ. ನಮ್ಮ ಸಿನಿಮಾಗಳು ಈ ಮೊದಲು ರಾಜ್ಯಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸಿರುವುದು ತುಂಬ ಸಂತಸ ಉಂಟು ಮಾಡಿದೆ. ನಾಡಿನ ಜನತೆ ಕಾಂತಾರ ಸಿನಿಮಾಗೆ ಅದ್ಬುತ ಯಶಸ್ಸು ಕೊಟ್ಟಿದ್ದಾರೆ. ಸಿನಿಮಾದ ಗಳಿಕೆಯ ಬಗ್ಗೆ ನಾನು ಮಾತನಾಡುವುದಿಲ್ಲ, ನೀವು ನಿರ್ಮಾಪಕರನ್ನೇ ಕೇಳಬೇಕು. ಕಾಂತಾರ ನೆಕ್ಸ್ಟ್ ಚಾಪ್ಟರ್ ಕುರಿತು ಈಗ ಹೆಚ್ಚು ಮಾತನಾಡುವುದಿಲ್ಲ. ನನ್ನ ಮುಂದಿನ ಚಿತ್ರ ಜೈ ಹನುಮಾನ್ ಆಗಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಇತ್ತೀಚೆಗೆ ನಟ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಕನ್ನಡದಲ್ಲಿ ಅಣ್ಣಾವ್ರ ಹೇಗೋ ಅದೇ ರೀತಿ ಬಾಲಿವುಡ್‌ನಲ್ಲಿ ಅಮಿತಾಬ್ ಬಚ್ಚನ್. ನಾವು ಅಣ್ಣಾವ್ರನ್ನು ಯಾವ ರೀತಿ ನೋಡುತ್ತೇವೋ, ಅದೇ ರೀತಿ ಅಮಿತಾಬ್ ಬಚ್ಚನ್ ಅವರನ್ನು ಅಲ್ಲಿಯ ಜನ ನೋಡುತ್ತಾರೆ. ಅವರು ಡಾ.ರಾಜ್‌ಕುಮಾರ್ ಅವರೊಂದಿಗೆ ಒಡನಾಟದ ಹಲವು ವಿಚಾರಗಳನ್ನು ನನ್ನೊಂದಿಗೆ ಹಂಚಿಕೊಂಡರು ಎಂದು ಹೇಳಿದರು.
ಫ್ಯಾನ್‌ವಾರ್ ಕುರಿತು ಸಲಹೆ ನೀಡುವಷ್ಟು ದೊಡ್ಡವನು ನಾನಲ್ಲ. ಎಲ್ಲ ನಟರನ್ನು ಅಭಿಮಾನಿಯಾಗಿ ನೋಡುತ್ತೇನೆ. ಕನ್ನಡ ಚಿತ್ರರಂಗದ ಬಗ್ಗೆ ಎಲ್ಲರೂ ಹೆಮ್ಮೆ ಪಡುವ ಕಾಲ ಬಂದಿದೆ ಎಂದರು.
ಚಾಮುಂಡೇಶ್ವರಿ ದರ್ಶನ ಪಡೆದ ರಿಷಬ್ ಶೆಟ್ಟಿ
ಚಾಮುಂಡಿಬೆಟ್ಟಕ್ಕೆ ಗುರುವಾರ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆದರು. ನಾಲ್ಕು ನಿಮಿಷ ದೇವಿಯ ಮುಂದೆ ನಿಂತು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಹುಂಡಿಗೆ ಕಾಣಿಕೆ ಹಾಕಿದ ಹೊರ ಬಂದರು. ಈ ಸಂದರ್ಭ ಅವರ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು. ಸಂಜೆ ನಗರದ ಗಾಯತ್ರಿ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಸಂಭ್ರಮದ ಕ್ಷಣವನ್ನು ಕಳೆದರು.