ಚಿಕ್ಕಬಳ್ಳಾಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಪದ ಕೆಲಸದಿಂದಾಗಿಯೇ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರಬೇಕಾಯಿತು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ನೀಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಸಹ ಒಂದೇ ಪಕ್ಷದಲ್ಲಿದ್ದವರಲ್ಲ. ಜನತಾದಳದಲ್ಲಿ ಅಧಿಕಾರ ಅನುಭವಿಸಿದ ಬಳಿಕ ಆಡಳಿತದ ಆಸೆಗಾಗಿಯೇ ಕಾಂಗ್ರೆಸ್‌ಗೆ ಸೇರ್ಪಡೆಯಾದರು ಎಂದು ಕಿಡಿಕಾರಿದರು.
ವಿಧಾನಸಭಾ ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಜನತಾದಳದೊಂದಿಗೆ ಸಮ್ಮಿಶ್ರ ಸರ್ಕಾರ ನಡೆಸಲು ನಿರ್ಧಾರ ಕೈಗೊಂಡಿತು. ಇದು ಪ್ರಜಾಪ್ರಭುತ್ವ ವಿರೋಧಿ ಕ್ರಮ ಎಂದು ಹೇಳಿದಾಗ, ರಾಹುಲ್ ಗಾಂಧಿ ಮಾತಿನಂತೆ ನಡೆದುಕೊಳ್ಳುತ್ತಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು ಎಂದು ಸುಧಾಕರ್ ನೆನಪಿಸಿಕೊಂಡರು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ಹೆಸರಿನಲ್ಲಿ ಟೀಕಾ ಪ್ರಚಾರ ಸಭೆ ನಡೆಸಿದೆ. ಆದರೆ, ಬಿಜೆಪಿಯ ಆರೋಪಗಳಿಗೆ ಒಂದೇ ಒಂದು ಉತ್ತರ ನೀಡಲು ಆ ನಾಯಕರಿಗೆ ಸಾಧ್ಯವಾಗಿಲ್ಲ. ಸಿಎಂ ಆಗಿದ್ದವರು ಪ್ರಜಾಪ್ರಭುತ್ವದಲ್ಲಿ ಹೇಗೆ ಮಾತಾಡಬೇಕೆಂಬುದನ್ನು ಮೊದಲು ಕಲಿಯ ಬೇಕು. ಬಾರ್‌ನಲ್ಲಿ ಕುಡಿದು ಬಂದವರಂತೆ ವರ್ತಿಸಬಾರದು ಎಂದರು.
ಸಿದ್ದರಾಮಯ್ಯ ಜನತಾ ದಳದಲ್ಲಿ ಸಚಿವ, ಉಪ ಮುಖ್ಯಮಂತ್ರಿಯಾದರೂ ಬಳಿಕ ಕಾಂಗ್ರೆಸ್‌ಗೆ ಏಕೆ ಬಂದರು? ಆಶಯಕ್ಕಾ? ಬದ್ಧತೆಗಾ? ಇವರು ಮಾತ್ರ ಬಹಳ ಪವಿತ್ರರು, ನಾವೆಲ್ಲರೂ ಅಪವಿತ್ರರಾ? ಇಷ್ಟು ವಯಸ್ಸಾಗಿರುವವರೇ ಹೀಗಿರುವಾಗ, ಯುವಕರಾದವರು ನಾವೇನು ಮಾಡಬೇಕು? ಎಂದು ಪ್ರಶ್ನಿಸಿದರು. ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು ತಂದಿದ್ದು ಕಾಂಗ್ರೆಸ್ ಎಂದು ಹೇಳಲಾಗಿದೆ. ಆದರೆ, ಇಲ್ಲಿಗೆ ಬಂದು ಆರು ವರ್ಷದ ಮಗುವನ್ನು ಕೇಳಿದರೂ ಯಾರ ಕೊಡುಗೆ ಎಂಬುದು ತಿಳಿಯುತ್ತದೆ. ಇನ್ನು ಎಚ್‌ಎನ್ ವ್ಯಾಲಿ ಬಗ್ಗೆ ಶಾಸಕರಾದ ಶಿವಶಂಕರರೆಡ್ಡಿ ಹಾಗೂ ರಮೇಶ್‌ಕುಮಾರ್‌ಗೆ ಗೊತ್ತೇ ಇರಲಿಲ್ಲ. ಈ ಹಿಂದೆ ಎಚ್‌ಎನ್ ವ್ಯಾಲಿ ಯೋಜನೆ ಜಾರಿಗೆ ಸುಧಾಕರ್ ಕಾರಣ ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಈಗ ವರಸೆ ಬದಲಾಯಿಸಿದ್ದಾರೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಸೂರು
ತಾಲೂಕಿನ ಮುದ್ದೇನಹಳ್ಳಿ, ಅಜ್ಜವಾರ ಮತ್ತು ಹೊಸಹುಡ್ಯ ಗ್ರಾಪಂಗಳಲ್ಲಿ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಸುಧಾಕರ್ ಭಾಗವಹಿಸಿ, ಉಚಿತ ನಿವೇಶನ, ಫಲಾನುಭವಿಗಳ ಪಟ್ಟಿ ಮತ್ತು ಮಂಜೂರಾತಿ ಬಗ್ಗೆ ಚರ್ಚಿಸಿದರು. ಅಜ್ಜವಾರ ಗ್ರಾ.ಪಂ.ವ್ಯಾಪ್ತಿಯಲ್ಲಿ 485 ಜನರಿಗೆ ಉಚಿತ ನಿವೇಶನ ಮತ್ತು 100 ಮಂದಿಗೆ ಉಚಿತ ಮನೆ ಸೇರಿ 585 ಕುಟುಂಬಗಳಿಗೆ ಸೂರು ಕಲ್ಪಿಸಲಾಗುತ್ತದೆ. ಸೊಣ್ಣಾಪುರದ ಬಳಿ ಗ್ರಾಮಠಾಣಾಗೆ ಸೇರಿದ ಜಾಗದಲ್ಲಿ 43 ನಿವೇಶನ ನೀಡಲಾಗುತ್ತಿದೆ. ಇನ್ನು ಅರ್ಜಿ ಸಲ್ಲಿಸಿದವರಿಗೂ ನಿವೇಶನ ಸಿಗುತ್ತದೆ. ಹೊಸಹುಡ್ಯ ಗ್ರಾಪಂನಲ್ಲಿ ನಿವೇಶನ ರಹಿತ 297 ಕುಟುಂಬಗಳಿಗೆ ನಿವೇಶನ ಮತ್ತು ವಸತಿ ರಹಿತ 105 ಕುಟುಂಬಗಳಿಗೆ ಮನೆ ಸೇರಿ 402 ಕುಟುಂಬಗಳಿಗೆ ಸೂರು ಕಲ್ಪಿಸುವ ಕೆಲಸವಾಗಿದೆ. ಮುದ್ದೇನಹಳ್ಳಿ ಗ್ರಾ.ಪಂ.ನಲ್ಲಿ ನಿವೇಶನ ರಹಿತರಗಾಗಿ 6.19 ಎಕರೆ ಭೂಮಿ ಗುರ್ತಿಸಲಾಗಿದೆ. ಇದರಲ್ಲಿ 325 ನಿವೇಶನಗಳು ಮತ್ತು 100 ಮನೆಗಳು ಸೇರಿದಂತೆ 425 ಕುಟುಂಬಗಳಿಗೆ ಸ್ವಂತ ಸೂರು ಸಿಗಲಿದೆ ಎಂದರು.
ಕರಿ ಚಿರತೆಗಳಿಗೆ ಹೆದರುವುದಿಲ್ಲ
ಕರಿ ಚಿರತೆ ಹೆಸರಿನಲ್ಲಿ ಕಾಂಗ್ರೆಸ್ ಕಳ್ಳ ಚಿರತೆಯನ್ನು ಚಿಕ್ಕಬಳ್ಳಾಪುರಕ್ಕೆ ಕರೆ ತರುತ್ತಿದ್ದು ಇಂತಹ ಹತ್ತು ಜನ ಬಂದರೂ ಹೆದರುವುದಿಲ್ಲ. ದಲಿತ ಎಂಬ ಬೋಗಸ್ ಪ್ರಮಾಣ ಪತ್ರ ನೀಡಿ, ಐದು ವಷರ್ ಶಾಸಕನಾಗಿದ್ದವರನ್ನು ಚಿಕ್ಕಬಳ್ಳಾಪುರದ ಜನತೆ ಸುಮ್ಮನೆ ಬಿಡುತ್ತಾರೆಯೇ ಎಂದು ಸಚಿವರು ಪ್ರಶ್ನಿಸಿದರು.
ಕೈಗೆ ಸ್ಥಳೀಯ ಅಭ್ಯರ್ಥಿ ಇಲ್ಲವೇ?
ಚಿಕ್ಕಬಳ್ಳಾಪುರ: ಸ್ಥಳೀಯ ಅಭ್ಯರ್ಥಿ ಇಲ್ಲದೇ ಹೊರಗಿನಿಂದ ಇಲ್ಲಿಗೆ ಆಮದು ಮಾಡಿಕೊಳ್ಳಲು ಹೊರಟಿದ್ದಾರೆ ಎನ್ನುವ ಮೂಲಕ ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರನ್ನು ಅಭ್ಯರ್ಥಿಯನ್ನಾಗಿಸುವ ಕಾಂಗ್ರೆಸ್ ಯೋಜನೆಯನ್ನು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ.
ತಾಲೂಕಿನ ಅಜ್ಜವಾರದಲ್ಲಿ ಗ್ರಾಮ ಪಂಚಾಯಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಈ ಭಾಗದಲ್ಲಿ ವೈಯಕ್ತಿಕವಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದೇನೆ. ಸರ್ಕಾರದಿಂದ ಉಚಿತ ನಿವೇಶನ ಕೊಡಿಸಲಾಗುತ್ತಿದೆ. ಇದು ಬದ್ಧತೆ ಕೆಲಸ ಎಂದ ಸಚಿವ ಸುಧಾಕರ್, ಬಿಜೆಪಿ ಎದುರಿಸಲು ಅಕ್ರಮವಾಗಿ ದಲಿತ ಎಂಬ ಪ್ರಮಾಣಪತ್ರ ಪಡೆದು ಶಾಸಕರಾದ ಆರೋಪ ಇರುವವರನ್ನು ಇಲ್ಲಿ ಚುನಾವಣೆಗೆ ನಿಲ್ಲಿಸಲು ಮುಂದಾಗಿದ್ದಾರೆ. ಇನ್ನು ಅಕ್ರಮ ಪ್ರಮಾಣಪತ್ರ ಹೊಂದಿರುವವರು ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದೊಂದೇ ಕ್ಷೇತ್ರ ಹುಡುಕಾಡುತ್ತಿದ್ದು, ವರುಣಾ, ಚಾಮುಂಡೇಶ್ವರಿ, ಬಾದಾಮಿ ಬಳಿಕ ಈಗ ಕೋಲಾರಕ್ಕೆ ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು. ಸಿಎಜಿ ವರದಿಯಲ್ಲಿ ಉಲ್ಲೇಖಿಸಿದ್ದನ್ನು ಪ್ರಸ್ತಾಪಿಸಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಪ್ರಸ್ತಾಪಿಸಲಾಗಿದೆ. ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ ಟೆಂಡರ್ ಮೊತ್ತ ಹೆಚ್ಚಳವಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ ಎಂದರು. ಕ್ಷೇತ್ರದಲ್ಲಿ ಜಾತಿ, ಗ್ರಾಮ, ಪಕ್ಷದ ಮಾನದಂಡವಿಲ್ಲದೇ ಅರ್ಹ ಬಡ ಕುಟುಂಬಗಳಿಗೆ ಮಾತ್ರ ಪಾರದರ್ಶಕವಾಗಿ ನಿವೇಶನಗಳನ್ನು ವಿತರಿಸಲಾಗುತ್ತಿದೆ. ಯಾರೊಬ್ಬರೂ ನಯಾ ಪೈಸೆ ಯಾರಿಗೂ ಕೊಡಬೇಕಾಗಿಲ್ಲ. ಬೆಲೆ ನಿಯಂತ್ರಣ ಮತ್ತು ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶ್ರಮಿಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯ ಹೆಚ್ಚಿಸಲು ಗಮನ ಕೇಂದ್ರೀಕರಿಸಿದ್ದಾರೆ ಎಂದರು. ಈಗಾಗಲೇ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವನ್ನು ಇಲ್ಲಿಯೇ ಸ್ಥಾಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ತಾಪಂ ಇಒ ಮಂಜುನಾಥ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಲಕ್ಷೀನರಸಮ್ಮ, ಪಿಡಿಒ ಪ್ರದೀಪ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
ಕೃಷ್ಣಾ ನೀರು, ಮೆಟ್ರೋಗೆ ಪ್ರಯತ್ನ
ಈ ಹಿಂದೆ ನೀಡಿದ್ದ ಭರವಸೆಯಂತೆ ಕೃಷ್ಣಾನದಿ ನೀರು ಜಿಲ್ಲೆಗೆ ತರುವ ವಿಚಾರದಲ್ಲಿಯೂ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದು, ಮೆಟ್ರೋ ರೈಲನ್ನು ಚಿಕ್ಕಬಳ್ಳಾಪುರಕ್ಕೆ ತರಲು ಈಗಾಗಲೇ ಪ್ರಯತ್ನಿಸಲಾಗಿದೆ ಎಂದು ಸಚಿವರು ತಿಳಿಸಿದರು. ದೊಡ್ಡ ಕೈಗಾರಿಕಾ ವಲಯ ಇಲ್ಲಿ ಸ್ಥಾಪನೆಯಾಗಲಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಲು ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದರು.