ಜಿಲ್ಲೆ

ವ್ಯಾಪಾರಸ್ಥರ ಮೇಲೆ ನಂಬಿಕೆ ಇದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮೇಲೆ ವಿನಾಯಿತಿ ನೀಡಿರುವುದು ಐತಿಹಾಸಿಕ ನಿರ್ಣಯವಾಗಿದೆ. ಇದರ ಲಾಭವನ್ನು ವ್ಯಾಪಾರಸ್ಥರು ಗ್ರಾಹಕರಿಗೆ ವರ್ಗಾಯಿಸುತ್ತಾರೆಂಬ ನಂಬಿಕೆ ಇದೆ. ಈ ಕುರಿತು ನಿಗಾ ವಹಿಸಲಾಗುತ್ತಿದ್ದು, ತಪ್ಪಿದಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಜಿಎಸ್​ಟಿಯಲ್ಲಿ ವಿನಾಯಿತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಧನ್ಯವಾದ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಆಟೋಮೊಬೈಲ್ ಉದ್ಯಮಗಳು ಈಗಾಗಲೇ ಜಿಎಸ್​ಟಿ ವಿನಾಯಿತಿಯನ್ನು ಗ್ರಾಹಕರಿಗೆ ವರ್ಗಾಯಿಸಿದ್ದಾರೆ ಎಂದರು.

ಸದ್ಯ ಲೋಕಸಭೆಗೆ ಚುನಾವಣೆ ಇಲ್ಲ. ಬಿಹಾರ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಜಿಎಸ್​ಟಿ ದರ ಪರಿಷ್ಕರಣೆ ಮಾಡಲಾಗಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ತೆರಿಗೆ ಕಡಿಮೆ ಮಾಡಿ ಮತ ಗಳಿಸುವ ಉದ್ದೇಶ ನಮ್ಮದಲ್ಲ. ಒಂದು ರಾಷ್ಟ್ರ-ಒಂದು ಚುನಾವಣೆಗೆ ಬನ್ನಿ ಎಂದು ನಾವು ಕಾಂಗ್ರೆಸ್​ಗೆ ಸವಾಲು ಹಾಕಿದ್ದೇವೆ. ಅದಕ್ಕೂ ಕಾಂಗ್ರೆಸ್ ತಯಾರ ಇಲ್ಲ. ಒಂದು ರಾಷ್ಟ್ರೀಯ ಪಕ್ಷವಾಗಿ ವಿಚಾರ ಮಾಡುವ ದೃಷ್ಟಿಕೋನವೇ ಕಾಂಗ್ರೆಸ್ಸಿಗೆ ಇಲ್ಲ ಎಂದು ಟೀಕಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, 2017ರಲ್ಲಿ ಜಿಎಸ್​ಟಿ ಜಾರಿಗೆ ತಂದಾಗ ವಿರೋಧ ವ್ಯಕ್ತವಾಗಿದ್ದವು. ಅದರಿಂದ ದೇಶಕ್ಕೆ ಹೇಗೆ ಅನುಕೂಲವಾಯಿತು ಎನ್ನುವುದು ಜನರಿಗೆ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್​ಟಿ ದರದಲ್ಲಿ ಇಳಿಕೆ ಮಾಡಿ ಜನರಿಗೆ ಅನುಕೂಲ ಮಾಡಿದ್ದಾರೆ. ಇದರಿಂದ ವ್ಯಾಪಾರಸ್ಥರಿಗೆ, ಗ್ರಾಹಕರಿಗೆ ಒಳ್ಳೆಯದಾಗಲಿದೆ. ದೇಶ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮಾತನಾಡಿ, ಸುಮಾರು 28 ಸರಕುಗಳ ಮೇಲಿನ ಜಿಎಸ್​ಟಿ ದರದಲ್ಲಿ ಇಳಿಕೆಯಾಗಿದೆ. ಇದನ್ನು ಈ ಹಿಂದೆಯೇ ಮಾಡಬೇಕಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ಅವರು ಮಾಡಿದ ಆರ್ಥಿಕ ಹೊರೆಯನ್ನು ಪ್ರಧಾನಿ ಮೋದಿ ಇಳಿಸಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಜಿಎಸ್​ಟಿಯಲ್ಲಿ ಮಾಡಿರುವ ಪರಿಷ್ಕರಣೆಯಿಂದ ದೇಶದ ಭವಿಷ್ಯ ಉತ್ತುಂಗ ಸ್ಥಿತಿಗೆ ತಲುಪಲಿದೆ ಎಂದರು.

ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚವ್ಹಾಣ, ಮಾಜಿ ಶಾಸಕ ಅಶೋಕ ಕಾಟವೆ, ಡಾ.ಕ್ರಾಂತಿಕಿರಣ, ಸಂಜಯ ಕಪಟಕರ್, ಲಿಂಗರಾಜ ಪಾಟೀಲ, ಇತರರು ಇದ್ದರು. ವಿವಿಧ ಕ್ಷೇತ್ರಗಳ ಪ್ರಮುಖರಾದ ಸುನೀಲ ಗೋಖಲೆ, ಬಸವರಾಜ ಹೆಬಸೂರ, ಶ್ರೀಕಾಂತ ಕರಿ, ಚಂದಲಿಂಗ ಬಾರ್ಕೆರ, ನರೇಂದ್ರ ಕುಲಕರ್ಣಿ, ಭರತ ಭಂಡಾರಿ, ಇತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಸೆ. 17ರಿಂದ ಅಕ್ಟೋಬರ್ 2ರವರೆಗೆ ಬಿಜೆಪಿ ಆಯೋಜಿಸಿರುವ ಸೇವಾ ಪಾಕ್ಷಿಕದ ಅಂಗವಾಗಿ 30 ಜನ ಅಂಗವಿಕಲ ವಿದ್ಯಾರ್ಥಿಗಳಿಗೆ ಕಿಟ್ ವಿತರಿಸಲಾಯಿತು. ವಸಂತ ನಾಡಜೋಶಿ ಸ್ವಾಗತಿಸಿದರು. ಶಿವು ಮೆಣಸಿನಕಾಯಿ ನಿರೂಪಿಸಿದರು.