ಜಿಲ್ಲೆ

ಬಳ್ಳಾರಿ ಜೈಲಿಗೆ ದರ್ಶನ ಸ್ಥಳಾಂತರದ ಹಿಂದೆ ನನ್ನ ಪಾತ್ರವಿಲ್ಲ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ನಟ ದರ್ಶನ ಸ್ಥಳಾಂತರ ಮಾಡಿರುವುದು ಪೊಲೀಸ್ ಇಲಾಖೆಯ ನಿರ್ಧಾರವಾಗಿದೆ. ಇದರ ಹಿಂದೆ ನನ್ನ ಪಾತ್ರವಿಲ್ಲ. ನನಗೂ-ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಸತಿ, ವಕ್ಪ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಅಷ್ಟೇ. ಡಿಜಿಪಿ (ಪೊಲೀಸ್ ಮಹಾನಿರ್ದೇಶಕ) ಅಲ್ಲ. ದರ್ಶನ ನನ್ನ ಆತ್ಮೀಯ ನಿಜ. ಆದರೆ, ದರ್ಶನ ಜೈಲಿನಲ್ಲಿರುವಾಗ ನಾನು ಹೇಗೆ ಸಹಾಯ ಮಾಡುವುದಕ್ಕೆ ಸಾಧ್ಯ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ದೂರು ನೀಡಿದ ದಿನವೇ ರಾಜ್ಯಪಾಲರು ನೋಟಿಸ್ ನೀಡುತ್ತಾರೆ. 8 ತಿಂಗಳ ಹಿಂದೆ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಪೊಲೀಸ್ ಇಲಾಖೆ ತನಿಖೆಗೆ ಕೇಳಿದರೂ ಅನುಮತಿ ಕೊಟ್ಟಿಲ್ಲ. ಅಂದಿನ ಸಚಿವೆ ಶಶಿಕಲಾ ಜೊಲ್ಲೆ, ಮುರಗೇಶ ನಿರಾಣಿ, ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಯಾವುದೇ ಕ್ರಮವಾಗಿಲ್ಲ. ರಾಜಭವನ ಬಿಜೆಪಿ ಕಚೇರಿಯಾಗಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಹಾಗಾಗಿ ನಾವು ರಾಜಭವನ ಚಲೋ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.

ಮುಡಾ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯವರ ಪಾತ್ರ ಏನು ಇಲ್ಲ. ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆಯಲ್ಲಿ ಎಲ್ಲವೂ ಹೊರಗೆ ಬರುತ್ತಿದೆ. ಒಬ್ಬ ಅಹಿಂದ ನಾಯಕನ ಜನಪ್ರಿಯತೆಯನ್ನು ಬಿಜೆಪಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ಡ್ಯಾಮೇಜ್ ಮಾಡಿದರೆ, ಕಾಂಗ್ರೆಸ್ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆಂಬ ಭ್ರಮೆಯಲ್ಲಿ ಬಿಜೆಪಿ ಇದೆ ಎಂದು ಟೀಕಿಸಿದರು.