ಜಿಲ್ಲೆ

ನಾ ಕೊಡೆ... ನೀ ಬಿಡೆ... ಹಗ್ಗಜಗ್ಗಾಟ

ಗೌರಿಬಿದನೂರು: ಯಾವುದೇ ಕಾರಣಕ್ಕೂ ವಾಟದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರಿಗೆ ನೀರು ಹರಿಸಲು ಬಿಡುವುದಿಲ್ಲ...

ಹಾಗೆ ಹೇಳುವುದು ಸರಿಯಲ್ಲ. ನಾವೆಲ್ಲ ಒಂದೇ... ಕುಡಿಯುವ ವಿಚಾರದಲ್ಲಿ ಮಾನವೀಯತೆ ತೋರಬೇಕು. ನಗರಕ್ಕೆ ನೀರು ಹರಿಸುವ ಯೋಜನೆಗೆ ಸಹಕರಿಸಬೇಕು...

ಇದು, ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಟದಹೊಸಹಳ್ಳಿ ಭಾಗದ ರೈತರು ಮತ್ತು ನಗರ ನಾಗರಿಕರ ಸಭೆಯಲ್ಲಿ ನಡೆದ ಹಗ್ಗಜಗ್ಗಾಟ.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಎನ್​.ರವೀಂದ್ರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ ಯಾವುದೇ ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲ. ಆದ್ದರಿಂದ ಎಚ್​.ಎನ್​. ವ್ಯಾಲಿ ಹಾಗೂ ಕೆ.ಸಿ. ವ್ಯಾಲಿಗಳ ಮೂಲಕ ಸಂಸ್ಕರಿತ ನೀರನ್ನು ಈ ಜಿಲ್ಲೆಗಳ ಕೆರೆಗಳಿಗೆ ತುಂಬಿಸಲಾಗುತ್ತಿದೆ. ಗೌರಿಬಿದನೂರು ನಗರ ದಿನೇದಿನೆ ಬೆಳೆಯುತ್ತಿದ್ದು, 60 ಸಾವಿರ ಜನಸಂಖ್ಯೆಯಿದೆ.

ನಿತ್ಯ ನಗರಕ್ಕೆ 10ರಿಂದ 15 ಸಾವಿರ ಜನ ಬಂದು ಹೋಗುತ್ತಾರೆ. ಈಗಾಗಲೇ ನಗರ ನೀರಿನ ಅಭಾವ ಎದುರಿಸುತ್ತಿದೆ. ಭವಿಷ್ಯ ದೃಷ್ಟಿಯಲ್ಲಿರಿಸಿಕೊಂಡು ವಾಟದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ವಾಟದಹೊಸಹಳ್ಳಿ ಹಾಗೂ ನಗರ ಭಾಗಕ್ಕೆ ಎಷ್ಟು ಪ್ರಮಾಣದ ನೀರು ಬೇಕಿದೆ ಎಂಬುದರ ಸಾಧಕ ಬಾಧಕ ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

ರಾಜ್ಯ ರೈತ ಸಂದ ತಾಲೂಕು ಅಧ್ಯ ಮಾಳಪ್ಪ ಮಾತನಾಡಿ, 120 ವರ್ಷಗಳಿಂದ ರೈತರಿಗೆ ಯಾವುದೇ ಸುಂಕ ವಸೂಲಿ ಮಾಡದೆ ಕೆರೆಯಿಂದ ನೀರು ಒದಗಿಸಲಾಗುತ್ತಿದೆ. ಕೆರೆಯ ನೀರು ಈ ಭಾಗಕ್ಕೆ ಸೀಮಿತ ಎಂದು ಬ್ರಿಟಿಷ್​ ಆಡಳಿತದ 1930ರ ಅವಧಿಯಲ್ಲೆ ತೀರ್ಮಾನವಾಗಿದೆ ಎಂದರು.

ಗುಡಿಬಂಡೆ ಕೆರೆ ತುಂಬಿದರೆ ವಾಟದಹೊಸಹಳ್ಳಿ ಕೆರೆಗೆ ನೀರು ಬರಲಿದೆ. 1800 ಹೆಕ್ಟೇರ್​ ಜಮೀನಿಗೆ ನೀರು ಹರಿಯುತ್ತದೆ. ಈ ಭಾಗದಲ್ಲಿ ಯಾವುದೇ ನದಿ ನಾಲೆಗಳಿಲ್ಲ. ಈಗ ಏಕಾಏಕಿ ನೀರನ್ನು ನಗರಕ್ಕೆ ಹರಿಸಿದರೆ ಸ್ಥಳಿಯವಾಗಿ ತೊಂದರೆಯಾಗುತ್ತದೆ. 59 ಅಡಿ ಇರುವ ಕೆರೆಯಲ್ಲಿ ಈಗ 19 ಅಡಿ ಹೂಳು ತುಂಬಿದೆ. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೂ ತಿಳಿಸಲಾಗಿದೆ. ಎತ್ತಿನಹೊಳೆ ಯೋಜನೆ ಅವೈಾನಿಕ. 24 ಸಾವಿರ ಕೋಟಿ ರೂ. ವ್ಯರ್ಥ ಮಾಡಲಾಗುತ್ತಿದೆ ಎಂದು ತರು ಹೇಳುತ್ತಿದ್ದಾರೆ. ಆದರೆ, ಎತ್ತಿನಹೊಳೆ ನೀರನ್ನು ಕೆರೆಗೆ ಹರಿಸಿ ಬಳಿಕ ನಗರಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಶಾಸಕರು ಹೇಳುತ್ತಿದ್ದಾರೆ. ಅದರ ಬದಲಿಗೆ ನಗರದಲ್ಲಿರುವ ಕೆರೆಗಳನ್ನು ಅಭಿವೃದ್ಧಿಪಡಿಸಿ ಅದೇ ನೀರನ್ನು ನಗರಕ್ಕೆ ಬಳಸಿಕೊಳ್ಳಲಿ ಎಂದರು.

ಎತ್ತಿನಹೊಳೆ ಮೇಲೆ ನಂಬಿಕೆಯಿಲ್ಲ

ಮುಖಂಡ ಮಧು ಮಾತನಾಡಿ, ನಗರದಲ್ಲಿರುವಷ್ಟೇ ಜನಸಂಖ್ಯೆ ವಾಟದಹೊಸಹಳ್ಳಿ ಭಾಗದಲ್ಲಿದೆ. ನೀರನ್ನು ನಗರಕ್ಕೆ ತೆಗೆದುಕೊಂಡು ಹೋದರೆ ಇಲ್ಲಿನ ಜನಕ್ಕೆ ತೊಂದರೆಯಾಗುತ್ತದೆ. 24 ಕಿಮೀ ದೂರದಿಂದ ನೀರು ತೆಗೆದುಕೊಂಡು ಹೋಗುವ ಬದಲಿಗೆ ನಗರ ವ್ಯಾಪ್ತಿಯಲ್ಲಿರುವ ಕಲ್ಲೂಡಿ, ಗೊಟಕನಾಪುರ ಮತ್ತು ಮರಳೂರು ಕೆರೆಗಳನ್ನು ಅಭಿವೃದ್ಧಿಪಡಿಸಿ ನೀರಿನ ಶೇಖರಣಾ ಸಾಮರ್ಥ್ಯ ಹೆಚ್ಚಿಸಲಿ ಎಂದರು.

ಎತ್ತಿನಹೊಳೆ ನೀರು ಇನ್ನು ಸಕಲೇಶಪುರಕ್ಕೇ ಬಂದಿಲ್ಲ. ಚಿಕ್ಕಬಳ್ಳಾಪುರದವರೆಗೆ ಬರುತ್ತದೆ ಎಂಬ ನಂಬಿಕೆಯಿಲ್ಲ. ಎತ್ತಿನಹೊಳೆಗೆ ಡಿಪಿಆರ್​ ತಯಾರಿಸಲು ಇದ್ದ ಉತ್ಸಾಹವನ್ನು ಕೆರೆ ನೀರಿನ ವಿಚಾರದಲ್ಲಿ ಏಕೆ ತೋರಲಿಲ್ಲ ಎಂದು ಪ್ರಶ್ನಿಸಿದರು.

ಮೊದಲು ಪರ್ಯಾಯ ವ್ಯವಸ್ಥೆಯಾಗಲಿ

ಮುಖಂಡ ಹರ್ಷವರ್ಧನ್​ ರೆಡ್ಡಿ ಮಾತನಾಡಿ, ನಗರ ಭಾಗಕ್ಕೆ ಯಾವ ರೀತಿ ನೀರು ಒದಗಿಸಬೇಕು ಎಂದು ಡಿಪಿಆರ್​ ಮಾಡುವ ಮೊದಲು ಯೋಚಿಸಬೇಕಿತ್ತು. ವಾಟದಹೊಸಹಳ್ಳಿ ಭಾಗದಲ್ಲಿ ಎತ್ತಿನಹೊಳೆಯ ಪೈಪ್​ಲೈನ್​ ಹಾಕುವ ಕಾಮಗಾರಿ ಮುಗಿದಿದೆ. ಆದರೆ, ಇದುವರೆಗೂ ಯಾವುದೇ ಉಪಯೋಗವಾಗಿಲ್ಲ. ನಗರ ಭಾಗದ ಕೆರೆಗಳು ಒತ್ತುವರಿ ಇಲ್ಲವೇ ಅಭಿವೃದ್ಧಿ ಹೆಸರಲ್ಲಿ ಮಾಯವಾಗಿವೆ. ವಾಟದಹೊಸಹಳ್ಳಿ ಕೆರೆಯಲ್ಲಿ ಹೂಳು ತುಂಬಿದೆ. ಶಾಸಕರು ಕೇವಲ ಪೈಪ್​ಲೈನ್​ ಅಳವಡಿಸಲಾಗುವುದು ಎಂದು ಹೇಳುತ್ತಿದ್ದಾರೆ. ಎತ್ತಿನಹೊಳೆ ಅವೈಾನಿಕ ಯೋಜನೆಯಾಗಿದೆ. ಈಗ ಹಳೇ ಡಿಪಿಆರ್​ ತೆಗೆದು ಹೊಸದಾಗಿ ಡಿಪಿಆರ್​ ಮಾಡುತ್ತಿದ್ದಾರೆ. ನಮಗೆ ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕ ನಗರಕ್ಕೆ ನೀರನ್ನು ಹರಿಸಬೇಕು ಎಂದರು.

ಉತ್ತಮ ನಿರ್ಧಾರವಾಗಲಿ

ನಗರಸಭೆ ಸದಸ್ಯ ಚಂದ್ರಮೋಹನ್​ ಮಾತನಾಡಿ, ನಗರದ 31 ವಾರ್ಡ್​ಗಳ ಪೈಕಿ ಬಹುತೇಕ ವಾರ್ಡ್​ಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿಯಿದೆ. ಮಾನವೀಯತೆ ಬಿಟ್ಟು ಸ್ಥಳಿಯರಿಗೆ ಅನ್ಯಾಯ ಮಾಡಿ ನಗರಕ್ಕೆ ನೀರು ತರುವುದಿಲ್ಲ ಎಂದರು.

ಸದಸ್ಯ ಕಲೀಂ ಉಲ್ಲಾ ಮಾತನಾಡಿ, ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಜತೆ ನಾವಿದ್ದೇವೆ. ಎತ್ತಿನಹೊಳೆ ನೀರು ಕೊಟ್ಟ ನಂತರ ನಗರಕ್ಕೆ ನೀರು ಹರಿಸಲಾಗುವುದು. ಕೆರೆಗಳ ಮೂಲ ಉದ್ದೇಶಕ್ಕೆ ಧಕ್ಕೆಯಾಗದಂತೆ ಹಾಗೂ ಯಾರಿಗೂ ತೊಂದರೆಯಾಗದಂತೆ ಸರ್ಕಾರ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ವಾಸ್ತವ ಮರೆ

ಪರಿಸರವಾದಿ ಚೌಡಪ್ಪ ಮಾತನಾಡಿ, ಅವಿಭಜಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳನ್ನು ಅಭಿವೃದ್ಧಿ ನೆಪದಲ್ಲಿ ನಾಶಪಡಿಸಲಾಗಿದೆ. ಕೇವಲ ತಂತ್ರಾನದ ಅಂಕಿ&ಅಂಶಗಳ ಮೇಲೆ ಎತ್ತಿನಹೊಳೆ ಯೋಜನೆಯನ್ನು ಅವೈಾನಿಕವಾಗಿ ಜಾರಿಗೊಳಿಸಲಾಗುತ್ತಿದೆ. ವಾಸ್ತವತೆ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಭಾಗದ ಜನರ ಹೋರಾಟಗಳು ಹಾಗೂ ಮನವಿಗಳಿಗೆ ಕಿವಿಗೊಡುತ್ತಿಲ್ಲ. ಬೇಕಾದ ಯೋಜನೆಗಳನ್ನು ಜಾರಿಗೊಳಿಸಿ ಕೈತೊಳೆದುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ರವೀಂದ್ರ ಮಾತನಾಡಿ, ವಾಟದಹೊಸಹಳ್ಳಿ ಭಾಗದ ಜನತೆಗೆ ತೊಂದರೆಯಾಗದಂತೆ ನಗರಕ್ಕೆ ನೀರನ್ನು ತರಬೇಕು. ನಗರದ ಜನತೆ ಮತ್ತು ರೈತರಿಗೆ ಅನ್ಯಾಯವಾಗದಂತೆ ನೀರು ಹಂಚಿಕೆ ಮಾಡಲು ಪ್ರಯತ್ನ ಮಾಡಲಾಗುವುದು. ನೀರು ಎತ್ತುವಳಿ ಮಾಡುವ ಸಂದರ್ಭದಲ್ಲಿ ಮೀಟರ್​ ಅಳವಡಿಸಲಾಗುವುದು. ಹೆಚ್ಚು ನೀರು ಎತ್ತುವಳಿ ಮಾಡದಂತೆ ಸಮರ್ಪಕ ಕ್ರಮ ಕೈಗೊಳ್ಳಲಾಗುವುದು. ನೀರಿನ ವಿಚಾರದಲ್ಲಿ ಯಾರಿಗೂ ಅನ್ಯಾಯವಾಗದಂತೆ ಸಮಸ್ಯೆ ಬಗೆಹರಿಸಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಿತ ಜನಪ್ರತಿನಿಧಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್​ ಮಹೇಶ್​ ಎಸ್​. ಪತ್ರಿ, ಪೌರಾಯುಕ್ತೆ ಡಿ.ಎಂ.ಗೀತಾ, ಸಣ್ಣ ನೀರಾವರಿ ಇಲಾಖೆ ಎಇಇ ಶ್ರೀನಿವಾಸ್​, ಅಧಿಕಾರಿಗಳು, ವೃತ್ತ ನಿರೀಕ ಕೆ.ಪಿ ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.