ಬೆಂಗಳೂರು: ನನಗೆ ಬಲಿಜಿಗ ಜನಾಂಗದ ಬಗ್ಗೆ ಗೌರವವಿದೆ, ಆನೇಕಲ್ ತಿಮ್ಮಯ್ಯ ಟ್ರಸ್ಟಿನ ಒಂದಿಂಚೂ ಜಾಗ ನನಗೆ ಬೇಕಾಗಿಲ್ಲ, ನಾನು ಕಬಳಿಸಿಯೂ ಇಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟಪಡಿಸಿದರು.
ನಾನು ಒಂದು ರೂ. ಬಾಡಿಗೆ ಇಟ್ಟುಕೊಳ್ಳಲ್ಲ. ಟ್ರಸ್ಟ್‌ನ ಕೆಲವು ಪಟ್ಭಭದ್ರ ಹಿತಾಸಕ್ತಿಗಳು ವಿನಾಕಾರಣ ಆರೋಪ ಮಾಡುತ್ತಿವೆ. ನನ್ನ ಮೇಲೆ ಮಾಡಿರುವ ಆರೋಪ ನಿರಾಧಾರ, ನನಗೆ ಕಂಡೋರ ಜಾಗ ಬೇಡ. ಬೋಗಸ್ ದಾಖಲೆ ಸೃಷ್ಟಿ ಮಾಡಿದ್ದರೆ ಗಲ್ಲು ಶಿಕ್ಷೆ ವಿಧಿಸಲಿ. ಸುಳ್ಳು ಆರೋಪ ಬಿಡಬೇಕು ಎಂದು ಎಚ್ಚರಿಸಿದರು.
ಸಂಘದವರೇ ನನಗೆ ಕರೆದು ಬಾಡಿಗೆ ಆಧಾರದಲ್ಲಿ ಕಟ್ಟಡ ಕೊಟ್ಟಿದ್ದಾರೆ. ನಾನು 20 ಕೋಟಿ ರೂ. ಕಟ್ಟಡ ನವೀಕರಣಕ್ಕೆ ಖರ್ಚು ಮಾಡಿದ್ದೇನೆ. 30 ವರ್ಷ ಲೀಸ್ ಕೊಟ್ಟಿದ್ದಾರೆ. ಈಗ 28 ಕೋಟಿ ಕೊಟ್ಟು ಜಾಗ ಖಾಲಿ ಮಾಡಿ ಎಂದು ನನ್ನ ವಿರುದ್ಧ ಕೋರ್ಟ್‌ಗೆ ಹೋಗಿದ್ದಾರೆ. ಕೋರ್ಟ್‌ಗೆ ಹೋದ ಮೇಲೆ ಬಾಡಿಗೆ ಯಾರಿಗೆ ಕೊಡಬೇಕು? ನ್ಯಾಯಾಲಯದ ತೀರ್ಪು ಬರುವವರೆಗೆ ಸುಮ್ಮನಿರಬೇಕಲ್ಲವೆ ಎಂದು ಕೇಳಿದರು.
ನನ್ನದೂ ಒಂದು ಜನಾಂಗ ಇದೆ. ನಾನು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ನಾನೇನು ಆ ಜಾಗದಲ್ಲಿ ಕ್ಲಬ್,ಬಾರ್ ನಡೆಸುತ್ತಿಲ್ಲ, ಶಾಲೆ ನಡೆಸುತ್ತಿದ್ದೇನೆ.
ನಾನೇನು ಆನೇಕಲ್ ತಿಮ್ಮಯ್ಯ ಟ್ರಸ್ಟಿಗೆ ಬಂದು ಶಾಲೆ ಪ್ರಾರಂಭಿಸಬೇಕೆಂಬ ಇಚ್ಛೆ ಹೊಂದಿದ್ದವನಲ್ಲ. ಹಿಂದೆ ಇದ್ದಂತಹ ಕಮಿಟಿಯ ಸದಸ್ಯರುಗಳು ನನ್ನ ಬಳಿ ಬಂದು ನಾವು 15 ವರ್ಷಗಳ ಹಿಂದೆ ಬಿಲ್ಡಿಂಗ್ ಕಟ್ಟಬೇಕಾದರೆ ಸುಮಾರು 15 ಕೋಟಿ ರೂ.ಗಳನ್ನು ಅಪೆಕ್ಸ್ ಬ್ಯಾಂಕ್‌ನಲ್ಲಿ ಸಾಲ ಮಾಡಿರುತ್ತೇವೆ. ಈ ಬಿಲ್ಡಿಂಗ್‌ನಲ್ಲಿ ಐ.ಟಿ.ಕಚೇರಿ ತೆರೆಯಲು ಉದ್ದೇಶಿಸಿದ್ದೆವು. ಯಾವುದೇ ಐ.ಟಿ. ಕಂಪನಿ ಬಾರದೇ 15 ವರ್ಷದಿಂದ ಕಟ್ಟಡ ಉಪಯೋಗಿಸದೇ ಶಿಥಿಲಾವಸ್ಥೆ ತಲುಪುವ ಸ್ಥಿತಿಯಲ್ಲಿದೆ. ಬ್ಯಾಂಕಿನ ಬಡ್ಡಿಯೂ ಸಹ ಜಾಸ್ತಿಯಾಗಿದೆ, ಬಡ್ಡಿ ಕಟ್ಟಲು ಹೋರಾಟ ಮಾಡುತ್ತಿದ್ದೇವೆ. 3-4 ಬಾರಿ ಹರಾಜಿಗೂ ಬಂದಿದೆ ಎಂದು ಹೇಳಿ ನನ್ನನ್ನು ಕರೆದೊಯ್ದು ಕಟ್ಟಡವನ್ನು ತೋರಿಸಿ ಮನವೊಲಿಸಿ 2016ರಲ್ಲಿ ಆನೇಕಲ್ ಚಾರಿಟಬಲ್ ಟ್ರಸ್ಟ್‌ನ ರಿಜಿಸ್ಟರ್ಡ್ ಕಚೇರಿಯಲ್ಲಿ ಸಭೆ ಸೇರಿ ಆ ಸಭೆಯಲ್ಲಿ ಅಂದಿನ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಹಾಗೂ ಕಾರ್ಯದರ್ಶಿ ಲಕ್ಷ್ಮಯ್ಯರವರು ಹಾಗೂ ಪದಾಧಿಕಾರಿಗಳು ನನಗೆ 84,127 ಚ.ಅ.ಜಾಗವನ್ನು ಬಾಡಿಗೆಗಾಗಿ ಮತ್ತು ಬಿಲ್ಡಿಂಗ್‌ಗೆ ಸೇರಿದ ಅಕ್ಕ ಪಕ್ಕದ ಲಂಗ್ಸ್ ಸ್ಪೇಸ್ ಸೇರಿ ಚ.ಅ.ಗೆ 22.00 ರೂ.ನಂತೆ ಕೊಡಲು ಒಪ್ಪಿ ಒಂದು ವರ್ಷಕ್ಕೆ ಸುಮಾರು 2.35 ಕೋಟಿ ರೂ. ಗಳ ಬಾಡಿಗೆ ನಿರ್ಧರಿಸಿ, ಶಾಲೆಯನ್ನು ನಡೆಸಲು ಸಪೋರ್ಟ್ ಮಾಡುತ್ತೇವೆಂದು ಮೇ 26, 2017ರಲ್ಲಿ ಚಾಮರಾಜಪೇಟೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿತ ಕರಾರು ಮಾಡಿ ಕೊಟ್ಟಿರುತ್ತಾರೆ.
ಹೊಸದಾಗಿ ಬಂದ ಆಡಳಿತ ಮಂಡಳಿ ನನಗೆ ಉದ್ದೇಶಪೂರ್ವಕವಾಗಿಯೇ ಕಿರುಕುಳ ಕೊಡುತ್ತಿದೆ.
ನಾನು ಭೂ ಕಬಳಿಕೆ ಮಾಡಿದ್ದೇನೆ, ಬಾಡಿಗೆ ಕೊಟ್ಟಿಲ್ಲ ಎಂಬ ಆರೋಪ ಮಾಡಿದ್ದಾರೆ. ನಾನು ಬಾಡಿಗೆ ಹಣವನ್ನು ನ್ಯಾಯಾಲಯದ ಗಮನಕ್ಕೆ ತಂದು ಡೆಪಾಸಿಟ್ ಮಾಡಿದ್ದೇನೆ. ನನ್ನ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿ ಹೇಳಿಕೆ ಕೊಟ್ಟಿರುವ ವ್ಯಕ್ತಿಗಳ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧನಿದ್ದೇನೆ ಎಂದು ಎಲ್.ಆರ್.ಶಿವರಾಮೇಗೌಡ ಹೇಳಿದರು.