ಶಿವಮೊಗ್ಗ: ಎಂಎಲ್‌ಸಿ ಎಸ್.ಎಲ್.ಭೋಜೇಗೌಡ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುವ ದಾರಿದ್ರ್ಯ ನನಗೆ ಬಂದಿಲ್ಲ. ನನ್ನದು ಯಾರೊಂದಿಗೂ ಒಳಒಪ್ಪಂದವಿಲ್ಲ. ಏನಿದ್ದರೂ ಬಹಿರಂಗ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ ಸ್ಪಷ್ಟಪಡಿಸಿದರು.
ಎಸ್.ಎಲ್.ಭೋಜೇಗೌಡ ಅವರು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ. ಕಾಂಗ್ರೆಸ್ ಪಕ್ಷದಿಂದ ಕೆ.ಕೆ.ಮಂಜುನಾಥ ಕುಮಾರ್ ಅಭ್ಯರ್ಥಿಯಾಗಿದ್ದಾರೆ. ಕಳೆದ ಬಾರಿ ಅಲ್ಪಮತಗಳ ಅಂತರದಿಂದ ಮಂಜುನಾಥ ಸೋತಿದ್ದರು. ಈ ಬಾರಿ ನನ್ನ ಗೆಲುವಿನೊಂದಿಗೆ ಅವರ ಗೆಲುವು ಕೂಡ ನಿಶ್ಚಿತ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ವಾಮಾಚಾರದ ಮೂಲಕ ನಡೆಸುತ್ತಿದೆ. ಕ್ಲಬ್, ಹೋಟೆಲ್ಗಳನ್ನು ಕಾಯಂ ಆಗಿ ಬುಕ್ ಮಾಡಿಕೊಂಡಿದ್ದಾರೆ. ರಾಜಕೀಯ ಭೀಷ್ಮರು ಎನ್ನಿಸಿಕೊಂಡಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಜಿಲ್ಲೆಯಲ್ಲಿ ಇಂತಹ ಅನಾಚಾರವನ್ನು ನಿರೀಕ್ಷಿಸಿರಲಿಲ್ಲ. ಇಂತಹ ಅನಾಚಾರಗಳಿಂದಲೇ ಕಮಲ ಕೆಸರಿನಲ್ಲಿ ಮುಳುಗುತ್ತಿದೆ ಎಂದರು.
ರಘುಪತಿ ಭಟ್‌ಗೆ 2ನೇ ಪ್ರಾಶಸ್ತ್ಯ ನೀಡಿ: ನಮ್ಮದು ರಾಷ್ಟ್ರೀಯ ಪಕ್ಷ. ಸಾಮಾನ್ಯವಾಗಿ ಪ್ರತಿ ಚುನಾವಣೆಯಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿ ಪ್ರತಿಸ್ಪರ್ಧಿ ಆಗಿರುತ್ತಾರೆ. ಆದರೆ ಈ ಬಾರಿ ನಮಗೆ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಪ್ರತಿಸ್ಪರ್ಧಿ ಆಗಿದ್ದಾರೆ. ಪದವೀಧರರು ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು. ಅವಶ್ಯಬಿದ್ದರೆ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ಎರಡನೇ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.
ಸರ್ಜಿ ಧೂಮಕೇತು: ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು ವೈದ್ಯಕೀಯ ಕ್ಷೇತ್ರವನ್ನು ಉದ್ದಿಮೆ ಮಾಡಲು ಹೊರಟಿದ್ದಾರೆ. ವೈದ್ಯಕೀಯ ಸೇವಾ ಕ್ಷೇತ್ರವಾಗಬೇಕೋ ವಿನಃ ಉದ್ದಿಮೆ ಆಗಬಾರದು. ಕರೊನಾ ಸಂಕಷ್ಟದ ಸಮಯದಲ್ಲಿ ಸರ್ಕಾರದಿಂದ ಬಿಡುಗಡೆ ಆದ ಅನುದಾನ ಪಡೆಯುವಲ್ಲಿ ಡಾ. ಧನಂಜಯ ಸರ್ಜಿ ಜಿಲ್ಲೆಯಲ್ಲೇ ನಂಬರ್ ಒನ್ ಫಲಾನುಭವಿ ಆಗಿದ್ದಾರೆ. ಸರ್ಜಿ ಅವರಿಗೆ ದುಡ್ಡು ಮಾಡುವ ದಾಹದ ಜತೆಗೆ ಅಧಿಕಾರದ ದಾಹ ಬಂದಿದ್ದು ಧೂಮಕೇತುವನ್ನು ಬಿಜೆಪಿ ಕಾರ್ಯಕರ್ತರೂ ಒಪ್ಪಿಕೊಳ್ಳುವುದಿಲ್ಲ ಎಂದರು.