ಜಿಲ್ಲೆ

ಸಿದ್ದರಾಮಯ್ಯ 5 ವರ್ಷ ಇರ್ತಾರೋ, 3 ವರ್ಷ ಇರುತ್ತಾರೋ ಗೊತ್ತಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಮೈಸೂರು: ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರ್ತಾರೆ. ಆದರೆ, 5 ವರ್ಷ ಇರ್ತಾರೋ, 3 ವರ್ಷ ಇರುತ್ತಾರೋ ಅದು ನನಗೆ ಗೊತ್ತಿಲ್ಲ. ನೀವು ಅದನ್ನು ಹೈಕಮಾಂಡ್‌ಗೆ ಕೇಳಿ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.


ನಗರಕ್ಕೆ ಮಂಗಳವಾರ ದಿಢೀರ್ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ. ಇದರಲ್ಲಿ ಬೇರೆ ಯಾವುದೇ ಪ್ರಶ್ನೆ ಇಲ್ಲ. ನಾನು ಅವರ ಜತೆಯಲ್ಲಿ ಸಚಿವನಾಗಿ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯ ಬದಲಾವಣೆ ಪ್ರಶ್ನೆಯೇ ಉದ್ಭವಿಸಿಲ್ಲ. ಅಂತಹ ಯಾವುದೇ ಚರ್ಚೆಗಳು ನಡೆದಿಲ್ಲ. ಪ್ರತಿಪಕ್ಷಗಳು, ಮಾಧ್ಯಮಗಳು ಚರ್ಚೆ ಮಾಡುತ್ತಿವೆ ಎಂದರು.


ಪ್ರತಿಪಕ್ಷಗಳ ನಾಯಕರು ಪ್ರೀತಿಯಿಂದ ನಮ್ಮ ಹೆಸರು ಹೇಳುತ್ತಿದ್ದಾರೆಯಷ್ಟೆ. ಆದರೆ, ನಮ್ಮ ಪಕ್ಷದಲ್ಲಿ ಯಾವುದೇ ಚರ್ಚೆ, ಬೆಳವಣಿಗೆ ನಡೆದಿಲ್ಲ. ನಾನು ಈ ವಿಚಾರವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದು, ಯಾವುದೇ ನಾಯಕರ ಬೆಂಬಲಿಗರು ಅವರ ನಾಯಕರಿಗೆ ಮುಂದಿನ ಸಿಎಂ ಎಂದು ಜೈಕಾರ ಹಾಕುವುದು ಸಾಮಾನ್ಯ. ಇದನ್ನೇ ಮುಂದಿಟ್ಟುಕೊಂಡು ಏನೋ ಬದಲಾವಣೆ ಆಗುತ್ತದೆ ಎಂಬುದು ಸರಿಯಲ್ಲ ಎಂದು ಹೇಳಿದರು.


ಡಿ.ಕೆ.ಶಿವಕುಮಾರ್ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮತ್ತೊಬ್ಬರ ವಿಚಾರ ನಾನು ಹೇಳಲು ಆಗೋದಿಲ್ಲ. ರಾಜಕಾರಣಿಗಳು ಒಂದೆಡೆ ಸೇರಿದಾಗ ರಾಜಕಾರಣದ ಬಗ್ಗೆ ಚರ್ಚೆ ಮಾಡುತ್ತೇವೆ. ಅದರಲ್ಲಿ ವಿಶೇಷತೆ ಏನು ಇಲ್ಲ. ಇಂದಿನ ಮೈಸೂರು ಭೇಟಿಯಲ್ಲಿ ಮಹತ್ತರ ವಿಚಾರ ಏನು ಇಲ್ಲ. ಇಡೀ ದಿನ ಮೈಸೂರಿನಲ್ಲಿ ಓಡಾಡಿಕೊಂಡು ದಸರಾ ಕಾರ್ಯಕ್ರಮ ನೋಡುತ್ತೇನೆ ಅಷ್ಟೇ ಎಂದರು.