ಜಿಲ್ಲೆ

ವಾಮಾಚಾರದ ಬಗ್ಗೆ ನನಗೆ ಗೊತ್ತಿಲ್ಲ : ಸ್ನೇಹಮಯಿ ಕೃಷ್ಣ

ಆರ್.ಕೃಷ್ಣ

ಮೈಸೂರು: ಮಂಗಳೂರಿನಲ್ಲಿ ಯಾವ ಕಾರಣಕ್ಕೆ ಫೋಟೋ ಇಟ್ಟು ವಾಮಾಚಾರ ಮಾಡಿದ್ದಾರೆಯೋ ನನಗೆ ಗೊತ್ತಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪ್ರತಿಕ್ರಿಯಿಸಿದ್ದಾರೆ.

ಈ ರೀತಿ ವಾಮಾಚಾರ ಮಾಡಿರುವುದು ನನ್ನ ಪರವಾಗಿ ಅಲ್ಲ. ಬದಲಿಗೆ ನನ್ನ ವಶ ಪಡಿಸಿಕೊಳ್ಳಲು ಮಾಡಿರಬಹುದು. ಹಲವು ರೀತಿ ನನ್ನ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆದಿದೆ ಅದರಲ್ಲಿ ಇದೂ ಒಂದಾಗಿದೆ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಹರ್ಷ ಮತ್ತು ಶ್ರೀನಿಧಿ ಎಂದು ಹೆಸರು ಹೇಳಿಕೊಂಡು ಇಬ್ಬರು ಪಾರ್ವತಿ ಸಿದ್ದರಾಮಯ್ಯ ಪರವಾಗಿ ನನ್ನ ಬಳಿ ಬಂದಿದ್ದರು. ಅವರ ಪರವಾಗಿ ಬಂದು ಆಮಿಷವೊಡ್ಡಿದ್ದರು. ಆದರೆ ಅದಕ್ಕೆ ನಾನು ಸೊಪ್ಪು ಹಾಕಲಿಲ್ಲ ಎಂದರು.

ಕಪ್ಪು ಟೀ ಶರ್ಟ್ ಹಾಕಿರುವ ವ್ಯಕ್ತಿ ನಮ್ಮ ಬಾಸ್ ಅಂತ ಶ್ರೀನಿಧಿ ಮತ್ತು ಹರ್ಷ ನನ್ನ ಮಗನಿಗೆ ಒಬ್ಬ ವ್ಯಕ್ತಿಯ ಪೋಟೋ ತೋರಿಸಿದ್ದಾರೆ. ಇವರು ಮಂಗಳೂರಿನಲ್ಲಿ ಇದ್ದಾರೆ. ಇವರು ಹೇಳಿದಂತೆ ಮಾಡುತ್ತೇವೆ ಎಂದಿದ್ದರು. ಅವರ ತಂತ್ರ ಫಲಿಸದೆ ವಾಪಸ್ ಅಗಿದ್ದರು ಎಂದು ಹೇಳಿದರು.

ಹೀಗಾಗಿ ಅವರು ನನ್ನ ಪರವಾಗಿ ಅಥವಾ ನನಗೆ ಶಕ್ತಿ ತುಂಬಲು ಈ ರೀತಿ ಮಾಡಿಲ್ಲ. ಬದಲಿಗೆ ನನ್ನ ವಶ ಪಡಿಸಿಕೊಳ್ಳಲು ಈ ರೀತಿ ಮಾಡಿರಬಹದು. ಅವರು ಏನೇ ಪ್ರಯತ್ನ ಪಟ್ಟರೂ ನಾನು ಹೋರಾಟ ನಿಲ್ಲಿಸುವುದಿಲ್ಲ ಎಂದು ಕೃಷ್ಣ ಹೇಳಿದರು.