ಮೈಸೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ಲೋಕಾಯುಕ್ತ ಬಂದ್ ಮಾಡಿರಲಿಲ್ಲ. ಮಾಡಿದ್ದನ್ನು ಸಾಬೀತುಪಡಿಸಿದರೆ ತಕ್ಷಣ ರಾಜೀನಾಮೆ ಕೊಡುತ್ತೇನೆ. ಸುಳ್ಳೇ ಬಿಜೆಪಿ ಮನೆ ದೇವರು. ಹೀಗಾಗಿ ಲೋಕಾಯುಕ್ತ ವಿಚಾರದಲ್ಲೂ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೆವಷ್ಟೆ. ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿರಲಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇತ್ತು. ಎಲ್ಲ ಸತ್ಯ ಗೊತ್ತಿದ್ದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಎಸಿಬಿ ರದ್ದು ಮಾಡುತ್ತೇವೆ ಎಂದು ಬಿಜೆಪಿಯು ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ ಮಾಡಲಿಲ್ಲ. ಎಸಿಬಿ ರದ್ದು ಮಾಡಿದ್ದು ನ್ಯಾಯಾಲಯವೇ ಹೊರತು ಬಿಜೆಪಿಯಲ್ಲ. ಆ ಪಕ್ಷದವರಿಗೆ ಸುಳ್ಳು ಹೇಳುವುದು ಚಟವಾಗಿದೆ ಎಂದು ತಿರುಗೇಟು ನೀಡಿದರು.