ಮೈಸೂರು: ನನ್ನ ಮೇಲೂ ಕೆಲವರು ಕಲ್ಲು, ಇಟ್ಟಿಗೆ ಎಸೆದರು. ಆದರೆ ಅದರಿಂದ ಧೃತಿಗೆಡದೆ ಅದೇ ಕಲ್ಲು, ಇಟ್ಟಿಗೆಯನ್ನು ಬಳಸಿಕೊಂಡು ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲದಂತೆ ಜಯದೇವ ಆಸ್ಪತ್ರೆಯನ್ನು ಕಟ್ಟಿ ಬೆಳೆಸಲು ಶ್ರಮಿಸಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. 2006ರಲ್ಲಿ ಜಯದೇವ ಆಸ್ಪತ್ರೆಯ ನಿರ್ದೇಶಕನಾಗಿ ಅಧಿಕಾರ ವಹಿಸಿಕೊಂಡಾಗ ನನಗದು ಹೂವಿನ ಹಾಸಿಗೆ ಆಗಿರಲಿಲ್ಲ. ನನಗೊಂದು ಕನಸಿತ್ತು. ಜಯದೇವ ಆಸ್ಪತ್ರೆಯನ್ನು ಯಾವುದೇ ಖಾಸಗಿ ಆಸ್ಪತ್ರೆಗೆ ಕಡಿಮೆ ಇಲ್ಲದಂತೆ ಪಂಚತಾರಾ ಹೋಟೆಲ್‌ನಂತೆ ನಿರ್ವಹಣೆ ಮಾಡಬೇಕು ಎನ್ನುವುದು. ಈಗ ನನ್ನ ಆ ಕನಸು ನನಸಾಗಿದೆ ಎನ್ನುವ ತೃಪ್ತಿ ಇದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಸ್ಪತ್ರೆ ಹೆಸರು ಮಾಡಿದೆ. ಜಯದೇವ ಆಸ್ಪತ್ರೆಯನ್ನು ಮಾದರಿಯಾಗಿ ಇಟ್ಟುಕೊಂಡು ಇತರ ಆಸ್ಪತ್ರೆಗಳನ್ನು ನಿರ್ವಹಣೆ ಮಾಡಬೇಕು ಎಂದು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ನಾನು ಮೈಸೂರು ಜಯದೇವ ಆಸ್ಪತ್ರೆಗೆ ನಿರ್ಮಾಣ ಹಂತದಲ್ಲಿ 73 ಬಾರಿ ಭೇಟಿ ನೀಡಿ ಪರಿಶೀಲಿಸಿ ನನ್ನ ಸ್ವಂತ ಮನೆ ಕಟ್ಟಿಸಿದ ಹಾಗೆ ಕಟ್ಟಿಸಿದ್ದೇನೆ. ಆಸ್ಪತ್ರೆಯ ಕಟ್ಟಡ ಹಾಗೂ ಗುಣಮಟ್ಟದ ಉಪಕರಣಗಳಿಂದ ಮಾತ್ರ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಹೃದಯವಂತಿಕೆ ಇರಬೇಕು. ಅವಕಾಶ ಸಿಕ್ಕಾಗ ಜನರಿಗೆ ಎಷ್ಟು ಸಹಾಯ ಮಾಡಬೇಕೋ ಅಷ್ಟು ಸಹಾಯ ಮಾಡಬೇಕು ಎಂದರು.
ಜಯದೇವ ಹೃದ್ರೋಗ ಆಸ್ಪತ್ರೆ ಕಳೆದ 18 ವರ್ಷಗಳಲ್ಲಿ ಶೇ.500 ರಷ್ಟು ಪ್ರಗತಿ ಸಾಧಿಸಿದ್ದು, ಈ ಆಸ್ಪತ್ರೆ ರೋಗಿಗಳ ಪಾಲಿಗೆ ಬೇಡಿದ್ದು ಸಿಕ್ಕಿದೆ. ನಾನು ನಿರ್ದೇಶಕನಾಗಿ, ಡಾಕ್ಟರ್ ಆಗಿ , ಇಂಜಿನಿಯರ್ ಆಗಿ , ಕೌನ್ಸಿಲರ್ ಆಗಿ ಈ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ನಾವು ಯಾವುದನ್ನೇ ನೋಡಿದರೂ ಸಕಾರಾತ್ಮಕವಾಗಿ ನೋಡಬೇಕು ಎಂದು ಹೇಳಿದರು.
ಟೀಕೆಗಳು ಹುಟ್ಟುತ್ತವೆ, ಸಾಯುತ್ತವೆ. ಆದರೆ ಸಾಧನೆಗಳು ಅಮರವಾಗಿ ಉಳಿಯುತ್ತವೆ. ಸಂಬಂಧಗಳು ಯಾವಾಗಲೂ ಹಸಿರಾಗಿರಬೇಕು. ಆದರೆ ಇಂದು ಸಂಬಂಧಗಳ ಕೊರತೆ ಇದೆ. ಅಧಿಕಾರದಲ್ಲಿ ಕೂರುವವರಿಗೆ ಬುದ್ಧಿವಂತಿಕೆ ಇದ್ದರೆ ಸಾಲದು. ಹೃದಯವಂತಿಕೆಯೂ ಇರಬೇಕು. ನಾವು ಮಾಡುವ ಕೆಲಸವನ್ನು ಪ್ರೀತಿಸಬೇಕು ಎಂದು ಸಲಹೆ ನೀಡಿದರು.
ಮೈಸೂರು ಜಯದೇವ ಆಸ್ಪತ್ರೆ ಕಳೆದ 13 ವರ್ಷಗಳಿಂದ ಡಾ.ಸದಾನಂದ್ ನೇತೃತ್ವದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ. ರೋಗಿಗಳನ್ನು ದೇವರೆಂದು ತಿಳಿದು ತಾಯಿ ಹೃದಯದಿಂದ ಕೆಲಸ ಮಾಡಬೇಕು. ಇದುವರೆಗೆ ನನಗೆ ಸಹಕರಿಸಿದ ಎಲ್ಲ ಸರ್ಕಾರಗಳು, ಮುಖ್ಯಮಂತ್ರಿಗಳು, ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಶೇಖರ್, ಅನಸೂಯ ಮಂಜುನಾಥ್, ಮೈಸೂರು ಮೆಡಿಕಲ್ ಕಾಲೇಜಿನ ಡೀನ್ ಮತ್ತು ಡೈರೆಕ್ಟರ್ ಡಾ.ದಾಕ್ಷಾಯಿಣಿ, ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ನಿವೃತ್ತ ಪ್ರಾಂಶುಪಾಲ ಪ್ರೊ.ಎಂ.ಕೃಷ್ಣೇಗೌಡ, ನಿವೃತ್ತ ಅಧಿಕಾರಿ ಚಿಕ್ಕತಿಮ್ಮಯ್ಯ ಮಾತನಾಡಿದರು.
ಮೈಸೂರು ಜಯದೇವ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಎಸ್.ಸದಾನಂದ್, ವೈದ್ಯರಾದ ಡಾ. ದೇವರಾಜು, ಡಾ.ಶ್ವೇತಾ ಸದಾನಂದ್, ಡಾ.ಹರ್ಷಾ ಬಸಪ್ಪ, ಡಾ.ಸಂತೋಷ್, ಡಾ.ವೀಣಾ ನಂಜಪ್ಪ, ಡಾ.ಎಸ್. ಹೇಮಾ, ಡಾ.ಮಧುಪ್ರಕಾಶ್, ಡಾ.ಭಾರತಿ, ಡಾ.ವಿಶ್ವನಾಥ್, ಡಾ.ಅಶ್ವಿನಿ, ಡಾ.ಜಯಪ್ರಕಾಶ್, ಡಾ. ಶ್ರೀನಿಧಿ ಹೆಗ್ಗಡೆ, ಡಾ.ರಶ್ಮಿ, ಆರ್‌ಎಂಒ ಡಾ.ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್ ಕುಮಾರ್, ಪಿಆರ್‌ಒ ವಾಣಿ ಇತರರು ಇದ್ದರು.