ತುಮಕೂರು: ಪಕ್ಷದ ನಾಯಕರನ್ನು ಬಿಟ್ಟು ರಾಜಕಾರಣ ಮಾಡಲು ಸಾಧ್ಯವಿಲ್ಲ, ನಾನೇ ಪಟೇಲ, ನಾನೇ ಗೌಡ ಎಂದು ಹೋದರೆ ಒಂಟಿಯಾಗುತ್ತೀರ, ಇದು ಐದು ವರ್ಷದ ತಾತ್ಕಾಲಿಕ ಅಧಿಕಾರ ಎಂಬ ತಿಳಿವಳಿಕೆ ನಿಮಗಿರಲಿ ಎಂದು ಗ್ರಾಪಂ ಸದಸ್ಯರಿಗೆ ಡಿಸಿಎಂ ಡಾ.ಅಶ್ವತ್ಥನಾರಾಯಣ ಸಲಹೆ ನೀಡಿದರು.
ಗ್ರಾಪಂ ಚುನಾವಣೆಯಲ್ಲಿ ಜಯಗಳಿಸಿರುವ ಬಿಜೆಪಿ ಬೆಂಬಲಿತ ಸದಸ್ಯರನ್ನು ಅಭಿನಂದಿಸಲು ಮಂಗಳವಾರ ಬಿಜೆಪಿ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿದ್ದ ‘ಜನ ಸೇವಕ’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅಧಿಕಾರ ತಲೆಗೆ ಹತ್ತಿಸಿಕೊಳ್ಳಬೇಡಿ, ಜನರ ಸೇವಕ ಎಂಬ ಅರಿವು ಸದಾ ಇಟ್ಟುಕೊಂಡು ಗ್ರಾಮೀಣಾಭಿವೃದ್ಧಿಗೆ ಕೆಲಸ ಮಾಡಿ, ಪೌರಕಾರ್ಮಿಕರ ಕಾಲು ತೊಳೆದು ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಮೇಲ್ಪಂಕ್ತಿ ಹಾಕಿಕೊಟ್ಟಿದ್ದು ಅವರ ದಾರಿಯಲ್ಲಿ ನಡೆಯಬೇಕು, ಎಪ್ಪತ್ತು ವರ್ಷದಲ್ಲಿ ಮಾಡಲಾಗದ ಕೆಲಸವನ್ನು ಕಳೆದ ಆರು ವರ್ಷದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲಿ ಮಾಡಿ ತೋರಿಸಿದೆ, ಭಾರತೀಯರ ಕನಸಾಗಿದ್ದ ರಾಮಮಂದಿರ ಕೂಡ ನಿರ್ಮಾಣವಾಗಲಿದೆ ಎಂದರು.
ಗ್ರಾಪಂ ಸದಸ್ಯರು ಸರ್ಕಾರ ಹಾಗೂ ಜನರ ನಡುವಿನ ಕೊಂಡಿಯಾಗಿ ಕೆಲಸ ಮಾಡಬೇಕು, ಸರ್ಕಾರದ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡು ಜನೋಪಯೋಗಿ ಆಗಬೇಕು ಎಂದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ನಾಡು ಹಾಗೂ ದೇಶ ಕಟ್ಟುವ ಕೆಲಸ ಗ್ರಾಪಂ ಮೂಲಕವೇ ನಡೆಯಬೇಕು, ಇಂತಹ ದೇಶ ಕಟ್ಟುವ ಕಾರ್ಯ ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಕಳೆದ 70 ವರ್ಷದಲ್ಲಿ ಗ್ರಾಮಾಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಲಿಲ್ಲ. ವಾಜಪೇಯಿ ಹಾಗೂ ನರೇಂದ್ರಮೋದಿ ಸರ್ಕಾರ ವಿಶೇಷ ಕಾಳಜಿ ವಹಿಸಿದೆ, ಕೇವಲ ಘೋಷಣೆ ಕೊಡದೆ ಕಾರ್ಯಕ್ರಮ ನೀಡಿದೆ ಎಂದರು.
ಕಾಂಗ್ರೆಸ್ ಸುಳ್ಳಿನ ಕಂತೆ, ಅವರು ನೀಡಿದ ಯಾವ ಭಾಗ್ಯವೂ ಜನರಿಗೆ ತಲುಪಲಿಲ್ಲ, ಈಗ ಸರ್ಕಾರ ಬಂದರೆ 10 ಕೆಜಿ ಅಕ್ಕಿ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅಧಿಕಾರದಲ್ಲಿದ್ದಾಗ ಏಕೆ ಕೊಡಲಿಲ್ಲ ಎಂದು ಹರಿಹಾಯ್ದ ಅವರು, ಕಾಂಗ್ರೆಸ್ ರೂಪಿಸಿದ್ದ ಗ್ರಾಮ ವಿಕಾಸ ಯೋಜನೆ ಹಳ್ಳ ಹಿಡಿದಿದ್ದು ಸುವರ್ಣ ಗ್ರಾಮ ಯೋಜನೆ ಮತ್ತೆ ಜಾರಿಗೊಳಿಸುತ್ತೇವೆ ಎಂದರು.
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಮಾತನಾಡಿ, ಗ್ರಾಪಂ ಚುನಾವಣೆ ಗೆಲುವು ಕಷ್ಟ ಎಂಬ ಅರಿವು ನನಗಿದೆ. ರಾಜ್ಯದಲ್ಲಿ ಶೇ.70 ಸದಸ್ಯರು ಆಯ್ಕೆಯಾಗಿದ್ದಾರೆ, ಸೋತು ಗೆಲ್ಲುವುದರಲ್ಲಿ ಶಕ್ತಿಯಿದೆ, ಗೆದ್ದವರು, ಸೋತವರು ಸರ್ಕಾರವನ್ನು ಬಳಸಿಕೊಂಡು ಗ್ರಾಮಾಭಿವೃದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.
ಕಾಂಗ್ರೆಸ್‌ಮುಕ್ತ ತುಮಕೂರು ಎಂಬ ಸಂಕಲ್ಪ ಮಾಡಬೇಕು, ಹಳ್ಳಿಯಿಂದ ದೆಹಲಿವರೆಗೂ ಕಮಲವಿರಬೇಕು, 2023ರ ವಿಧಾನಸಭಾ ಚುನಾವಣೆಯಲ್ಲಿ 150 ಬಿಜೆಪಿ ಶಾಸಕರ ಆಯ್ಕೆಗೆ ಪಣತೊಡಬೇಕು ಎಂದರು.
ಡಿಸಿಎಂ ಲಕ್ಷ್ಮಣಸವದಿ ಮಾತನಾಡಿ, ಕಾರ್ಯಕರ್ತರಿಗೆ ಅಧಿಕಾರ ನೀಡುವ ಏಕೈಕ ರಾಜಕೀಯ ಪಕ್ಷವಾಗಿ ಬಿಜೆಪಿ ಗುರುತಿಸಿಕೊಂಡಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಸುರೇಶ್‌ಗೌಡ, ಶಾಸಕರಾದ ಬಿ.ಸಿ.ನಾಗೇಶ್, ಜಿ.ಬಿ.ಜ್ಯೋತಿಗಣೇಶ್, ಮಸಾಲೆ ಜಯರಾಮ್, ಡಾ.ರಾಜೇಶ್‌ಗೌಡ, ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ, ಸಂಸದರಾದ ಜಿ.ಎಸ್.ಬಸವರಾಜು, ಶಿವಕುಮಾರಉದಾಸಿ, ಮಾಜಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕರಾದ ಕೆ.ಎಸ್.ಕಿರಣಕುಮಾರ್, ಡಾ.ಎಂ.ಹುಲಿನಾಯ್ಕರ್, ಪಿಎಲ್‌ಡಿ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಮುಖಂಡರಾದ ಎಂ.ಬಿ.ನಂದೀಶ್, ಎಸ್.ಆರ್.ಗೌಡ, ಬಿ.ಕೆ.ಮಂಜುನಾಥ್ ಇದ್ದರು.