ಲೋಕಸಭಾ ಚುನಾವಣೆಗೆ ನನ್ನದು ಯಾವ ಬೇಡಿಕೆಯೂ ಇಲ್ಲ, ಪಕ್ಷದ ತೀರ್ಮಾನಕ್ಕೆ ಬದ್ಧ. ಪಕ್ಷ ಸೂಚಿಸಿದರೆ ನಾನು ಅಭ್ಯರ್ಥಿಯಾಗುತ್ತೇನೆ ಎಂದು ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಮಾತನ್ನು ನಾನು ಕೇಳಲೇಬೇಕು. ಲೋಕಸಭೆಗೆ ನಮ್ಮ ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ದಾರೆ. ಬಿಜೆಪಿ ದುರಾಡಳಿತ ನೋಡಿ ಬೇಸತ್ತು ಜನ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದೇವೆ. ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟು ಗೆಲ್ಲುವುದಕ್ಕೆ ತಂತ್ರಗಾರಿಕೆ ಮಾಡಬೇಕು. ಯಾವ ಅಭ್ಯರ್ಥಿ ಸಮರ್ಥರಿದ್ದಾರೆ ಎಂದು ಸರ್ವೇ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಥಳೀಯ ನಾಯಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.
ನಮ್ಮ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಮಾಜಿ ಶಾಸಕನಾಗಿ ಕ್ಷೇತ್ರದ ಜನರು ನನ್ನ ಬಳಿ ಬಂದು ಕೇಳಿದಾಗ ಕೆಲಸ ಮಾಡಿಕೊಡುತ್ತಿದ್ದೇನೆ. ಅವರು ಕೊಟ್ಟ ಬೇಡಿಕೆಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇನೆ. ಅಷ್ಟಕ್ಕೆ ನಾನು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಅದಕ್ಕೆ ಯಾವ ಸಾಕ್ಷಿಯೂ ಇಲ್ಲ. ಯಾವುದೇ ಒಂದು ಸಾಕ್ಷಿ ಇದ್ರೆ ಕೊಡಲಿ. ಅದಕ್ಕೆ ತಕ್ಕ ಉತ್ತರ ಕೊಡುತ್ತೇನೆ. ನನ್ನ ವಿರುದ್ಧ ಮಾತನಾಡಲು ಏನೂ ಇಲ್ಲ. ಹೀಗಾಗಿ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದಾರೆ ಎಂದು ಸವಾಲು ಹಾಕಿದರು.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ವೈಎಸ್‌ಟಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ನವರು ಹತಾಶರಾಗಿದ್ದಾರೆ. ಕೇವಲ 19 ಸ್ಥಾನ ಬಂದಿರುವ ಕಾರಣ ಜೆಡಿಎಸ್ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವುದಕ್ಕೆ ಯಾವುದೇ ವಿಚಾರಗಳು ಸಿಗುತ್ತಿಲ್ಲ. ಹಿಂದೆ ಅವರು ಮಾಡಿದ ತಪ್ಪನ್ನು ನಮ್ಮ ತಲೆ ಮೇಲೆ ಕಟ್ಟಲು ಯತ್ನಿಸುತ್ತಿದ್ದಾರೆ ಎಂದು ದೂರಿದರು.
ಲೋಕಸಭಾ ಚುನಾವಣೆಗೂ ಮುನ್ನ ಜನರಿಗೆ ಕೊಟ್ಟ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಜೆಡಿಎಸ್, ಬಿಜೆಪಿ ಪ್ರತಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾರೆ. 2018, 2023ರ ವಿಧಾನಸಭಾ ಚುನಾವಣೆಗಳಲ್ಲೂ ಜೆಡಿಎಸ್, ಬಿಜೆಪಿ ಮೈತ್ರಿ ಮಾಡಿಕೊಂಡಿದ್ದವು. ಮುಂದಿನ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡರೂ ನಾವು ಅವರನ್ನು ಎದುರಿಸುತ್ತೇವೆ ಎಂದರು.