ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅರ್ಹತೆ ನನಗೂ ಇದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೀವು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿತರೇ? ಎಂಬ ಮಾಧ್ಯಮದವರ ಪ್ರಶ್ನೆಗೆ ನಾನು ಟಿಕೆಟ್ ಆಕಾಂಕ್ಷಿ ಎನ್ನುವುದಕ್ಕಿಂತ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅರ್ಹತೆಗಳಿವೆ ಎಂದು ಉತ್ತರಿಸಿದರು.
ಪೊಲೀಸ್ ಅಧಿಕಾರಿಯಾಗಿದ್ದಾಗ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸಿದ್ದೇನೆ. ಮೈಸೂರು, ಕೊಡಗು ಭಾಗದಲ್ಲಿಯೂ ಉತ್ತಮ ಕೆಲಸ ಮಾಡಿದ್ದೇನೆ. ಯಾರದೇ ರಕ್ತ ನೆಲದ ಮೇಲೆ ಬೀಳದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದ್ದೇನೆ. ಪಕ್ಷ ಅವಕಾಶ ನೀಡಿದರೆ ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧನಿದ್ದೇನೆ. ಈ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿದ್ದೇನೆ ಎಂದರು.
ನಾನು ಮೈಸೂರಿಗೆ ಬರುತ್ತಿರುವುದು ನಮ್ಮ ಸಮಾಜದ ಒಳಿತಿಗಾಗಿ. ನಮ್ಮ ಸಮಾಜದ ಮುಂದೆ ಹಲವಾರು ಸವಾಲುಗಳಿವೆ. ದಿಟ್ಟ ಹೆಜ್ಜೆ ಇಡಲು ಚಿಂತನೆ ಮಾಡುತ್ತಿದ್ದೇವೆ. ನಮ್ಮ ಸಮಾಜದ ಮೇಲೆ ಎಲ್ಲ ಸಮುದಾಯದವರಿಗೆ ಗೌರವವಿದೆ. ಪ್ರತಿಷ್ಠಿತ ಹುದ್ದೆಗಳನ್ನು ನಮ್ಮ ಸಮಾಜದವರು ಅಲಂಕರಿಸಿದ್ದಾರೆ. ಹಂಗರ್ ಫಾರ್ ಪವರ್ ಇದ್ದರೆ ಮಾತ್ರ ನಾವು ಮುಂದೆ ಬರಲು ಸಾಧ್ಯ. ರಾಜಕೀಯಕ್ಕೆ ನಮ್ಮ ಸಮಾಜದಲ್ಲಿ ಯಾರೂ ಮುಂದೆ ಬರುತ್ತಿಲ್ಲ. ಪ್ರಯತ್ನವನ್ನೇ ಮಾಡದಿದ್ದರೆ ಯುದ್ದಕ್ಕೂ ಮುಂಚೆಯೇ ಸೋತಂತೆ ಎಂದರು.