ಮುಳಬಾಗಿಲು: ಪ್ರತಿ ಹಳ್ಳಿಯ ಪ್ರತಿ ಕಾಲನಿ ಸ್ವಚ್ಛತೆಯಿಂದ ಕೂಡಿದ್ದರೆ ರೋಗಮುಕ್ತ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ದೇಶ್ಯಾದ್ಯಂತ ಅ.2ರ ಗಾಂಧೀಜಿ ಜಯಂತಿ ವರೆಗೂ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡಿದ್ದು, ಯಶಸ್ವಿಗೊಳಿಸುವ ಮೂಲಕ ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ಪ್ರವಿಣ್ ಪಿ. ಬಾಗೇವಾಡಿ ಕರೆ ನೀಡಿದರು.
ತಾಲೂಕಿನ ಉತ್ತನೂರು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಬುಧವಾರ ಸ್ವಚ್ಛತಾ ಹೀ ಸೇವಾ (ಸ್ವಚ್ಛತೆಯೇ ಸೇವೆ) 2025 ಜಿಲ್ಲಾಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯಕರ ಪರಿಸರ ನಿರ್ಮಾಣ ಮಾಡಬೇಕು. ಜಿಲ್ಲೆಯ 154 ಪಂಚಾಯಿತಿಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಗ್ರಾಮಗಳನ್ನು ಸ್ವಚ್ಛವಾಗಿರಸಬೇಕು ಎಂದು ತಿಳಿಸಿದರು.
ಉತ್ತನೂರು ಗ್ರಾಮದ ಶ್ರೀ ವರದರಾಜಸ್ವಾಮಿ ದೇವಸ್ಥಾನದ ಕಲ್ಯಾಣಿಯಲ್ಲಿ ಸ್ವತ@ ಪೊರೆಕೆ ಹಿಡಿದು ಸ್ವಚ್ಛತೆಗೆ ನಿಂತ ಸಿಇಒ ಅವರಿಗೆ ಅಧಿಕಾರಿಗಳು ಸಾಥ್ ನೀಡಿದರು. ಸ್ವಚ್ಛ ಭಾರತ ಅಭಿಯಾನದ 11ನೇ ವಾರ್ಷಿಕೋತ್ಸವ ಹೊತ್ತಿನಲ್ಲಿ ಈ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಂಜುನಾಥಸ್ವಾಮಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷವು ಸ್ವಚ್ಛತಾ ಹೀ ಸೇವಾ ಪಾಕ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಈ ವರ್ಷವು ಸಹ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು 17ನೇ ರಿಂದ ರಿಂದ ಅ.2ರವರೆಗೆ ಸ್ವಚ್ಛತಾ ಹೀ ಸೇವಾ ಪಾಕ ಹಮ್ಮಿಕೊಂಡಿದ್ದು, ಇದು ದಿಲ್ಲಿಯಿಂದ ಹಳ್ಳಿಯವರೆಗೂ ಅನುಷ್ಠಾನಗೊಂಡರೆ ಸ್ವಚ್ಛ ಭಾರತ ಪ್ರಜ್ವಲಿಸಲಿದೆ ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಉತ್ತನೂರು ಶ್ರೀನಿವಾಸ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸ್ವಚ್ಛ ಭಾರತಕ್ಕೆ ಕರೆ ನೀಡಿದರು. ಅವರ ಜಯಂತಿಯಂದು ಅವರಿಗೆ ಗೌರವ ಸಲ್ಲಿಸಲು ಪ್ರತಿ ವರ್ಷ ಅ.2 ಅನ್ನು ಸ್ವಚ್ಛ ಭಾರತ ದಿನವನ್ನಾಗಿ ಆಚರಿಸುತ್ತಿದ್ದು, ಸ್ವಚ್ಛತೆಗಾಗಿ ಸ್ವಯಂ ಪ್ರೇರಣೆ ಮತ್ತು ಸಾಮೂಹಿಕ ಶ್ರಮದಾನ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.
ಗ್ರಾಪಂ. ಸದಸ್ಯರು, ಸಿಬ್ಬಂದಿ, ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ ಮಿಷನ್ ಯೋಜನೆಯ ಸಮಾಲೋಚಕರು, ಸ್ವಸಹಾಯ ಸಂದ ಸದಸ್ಯರು, ಶಾಲಾಮಕ್ಕಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.