ಮಡಿಕೇರಿ:
ಕೊಡಗಿನ ಮೊದಲ ದೊಡ್ಡ ಪ್ರಮಾಣದ ಜಲ ವಿದ್ಯುತ್ ಯೋಜನೆ ಹೆಗ್ಗಳಿಕೆಯ ಹಾರಂಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರಲ್ಲಿ ಇದೇ ಮೊದಲ ಬಾರಿಗೆ ಜೂನ್ ತಿಂಗಳಿನಲ್ಲೇ ವಿದ್ಯುತ್ ಉತ್ಪಾದನೆ ಆರಂಭವಾಗಿದೆ. ಹಾರಂಗಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಅಣೆಕಟ್ಟೆಗೆ ಒಳಹರಿವು ಹೆಚ್ಚು ಇರುವ ಕಾರಣ ನದಿಗೆ ನೀರು ಹರಿಸಲಾಗುತ್ತಿದೆ. ಹಾಗಾಗಿ ಶುಕ್ರವಾರ (ಜೂ.13) ರಾತ್ರಿಯಿಂದ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿದೆ.
ಕೆಆರ್‌ಎಸ್‌ಗೆ ಪ್ರಮುಖ ಜಲಮೂಲಗಳಲ್ಲಿ ಒಂದಾಗಿರುವ ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ಇರುವ ಹಾರಂಗಿ ಜಲಾಶಯ ಈ ಬಾರಿಯ ಮುಂಗಾರು ಪೂರ್ವ ಮಳೆಯಿಂದಾಗಿ ಮೇ ತಿಂಗಳಿನಲ್ಲೇ ಬಹುತೇಕ ಭರ್ತಿ ಆಗಿತ್ತು. ನಂತರ ಜೂನ್ ಮೊದಲ ವಾರದಲ್ಲಿ ಮತ್ತೆ ಮಳೆ ಶುರುವಾದ ಕಾರಣ ಈ ಬಾರಿ ಜೂ. 3ರಂದು ಜಲಾಶಯದಿಂದ ನದಿಗೆ ನೀರು ಹರಿಸಲಾಗಿತ್ತು. ಈ ಸಂದರ್ಭದಲ್ಲೇ ಹಾರಂಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರಲ್ಲಿವಿದ್ಯುತ್ ಉತ್ಪಾದನೆ ಆರಂಭಿಸುವ ಅವಕಾಶಗಳು ಇತ್ತಾದರೂ ತಾಂತ್ರಿಕ ಕಾರಣಗಳಿಂದ ಆಗಿರಲಿಲ್ಲ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ಖಾಲಿ ಇರುವ ಹಾರಂಗಿ ಅಣೆಕಟ್ಟೆ ಭರ್ತಿ ಆಗಲು ಜೂನ್‌ನಿಂದ ಮಳೆ ಶುರುವಾದರೂ ಜುಲೈ ಮೊದಲ ವಾರದ ತನಕ ಕಾಯಬೇಕಿತ್ತು. ಆದರೆ ಈ ವರ್ಷ ಬೇಸಿಗೆಯಲ್ಲೂ ಅಣೆಕಟ್ಟೆಯಲ್ಲಿ ನೀರಿನ ಉತ್ತಮ ಮಟ್ಟವನ್ನು ಕಾಪಾಡಿಕೊಂಡಿದ್ದ ಕಾರಣ ಅವಧಿಗೆ ಮೊದಲೇ ಭರ್ತಿ ಆಗಿದೆ. ಇದರ ನಿರೀಕ್ಷೆ ಇರದಿದ್ದ ವಿದ್ಯುತ್ ಉತ್ಪಾದನಾ ಘಟಕದ ಸಿಬ್ಬಂದಿ ವಿದ್ಯುತ್ ಉತ್ಪಾದನೆಗೆ ಸಜ್ಜಾಗಿರಲಿಲ್ಲ. ಕಳೆದ ವರ್ಷ ಜುಲೈ 8ಕ್ಕೆ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭ ಆಗಿತ್ತು. ಮಳೆಗಾಲದಲ್ಲಿ ಈ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆ ಅತ್ಯಂತ ಬೇಗ ಆರಂಭವಾಗಿರುವ ದಾಖಲೆ ಇರುವುದು ಜುಲೈ 2.
ಜುಲೈನಲ್ಲಿ ಅಣೆಕಟ್ಟೆಯಿಂದ ನದಿಗೆ ನೀರುವ ಹರಿಸುವ ನಿರೀಕ್ಷೆಯಲ್ಲಿದ್ದ ವಿದ್ಯುತ್ ಉತ್ಪಾದನಾ ಕೇಂದ್ರದ ಆಡಳಿತ ವರ್ಗ ನಿರ್ವಹಣೆಯನ್ನು ಸ್ವಲ್ಪ ನಿಧಾನ ಮಾಡಿತ್ತು. ಆದರೆ ಇವರ ನಿರೀಕ್ಷೆಗೂ ಮೊದಲೇ ಹಾರಂಗಿ ಅಣೆಕಟ್ಟೆ ಅಧಿಕಾರಿಗಳು ನದಿಗೆ ನೀರು ಹರಿಸಿದ ಕಾರಣ ಜೂ. 3ರಿಂದ ವಿದ್ಯುತ್ ಉತ್ಪಾದನೆ ಸಾಧ್ಯ ಆಗಿರಲಿಲ್ಲ. ಇದೀಗ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಶುಕ್ರವಾರ ರಾತ್ರಿಯಿಂದ ವಿದ್ಯುತ್ ಉತ್ಪಾದನೆ ಆರಂಭಿಸಲಾಗಿದೆ. ಈ ಮೂಲಕ ಕೇಂದ್ರ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಜೂನ್‌ನಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ದಾಖಲೆ ಮಾಡಿದಂತಾಗಿದೆ.
ಹಾರಂಗಿ ಅಣೆಕಟ್ಟೆಯ ಪಕ್ಕದಲ್ಲೇ ಇಡಿಸಿಎಲ್ (ಎನರ್ಜಿ ಡೆವಲಪ್‌ಮೆಂಟ್ ಕಾರ್ಪೋರೇಷನ್) ಮಾಲೀಕತ್ವದ ಹಾರಂಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಕೇಂದ್ರಕ್ಕೆ ಸಂಬAಧಿಸಿದAತೆ 2 ವಿದ್ಯುತ್ ಉತ್ಪಾದನಾ ಘಟಕಗಳಿವೆ. ಮೊದಲನೇ ಘಟಕದಲ್ಲಿ ತಲಾ 4.5 ಮೆಗಾವ್ಯಾಟ್ ಸಾಮರ್ಥ್ಯದ 2 ಜನರೇಟ್‌ಗಳಿದ್ದು, ಜಲಾಶಯದಿಂದ ನದಿಗೆ ಮತ್ತು ಕೃಷಿ ಉದ್ದೇಶಕ್ಕೆ ಕಾಲುವೆಗೆ ನೀರು ಹರಿಸುವ ಸಂದರ್ಭ ಇಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತದೆ. 2ನೇ ಘಟಕದಲ್ಲಿ 6 ಮೆಗಾವ್ಯಾಟ್ ಸಾಮರ್ಥ್ಯದ ಒಂದು ಜನರೇಟರ್ ಇದೆ. ನದಿಗೆ ನೀರು ಹರಿಸುವ ವೇಳೆಯಲ್ಲಿ ಮಾತ್ರ ಇಲ್ಲಿ ವಿದ್ಯುತ್ ಉತ್ಪಾದನೆ ನಡೆಯುತ್ತದೆ. ಮೊದಲನೇ ಘಟಕದಲ್ಲಿ ಉಪಯೋಗವಾದ ನೀರನ್ನು ಇಲ್ಲಿ ಮರುಬಳಕೆ ಮಾಡಲಾಗುತ್ತದೆ.
ಮಳೆಗಾಲದಲ್ಲಿ ಹಾರಂಗಿ ಜಲಾಶಯ ಭರ್ತಿ ಆಗಿ ಹೆಚ್ಚುವರಿ ನೀರು ನದಿಗೆ ಬಿಡುತ್ತಿದ್ದಂತೆಯೇ ಇಲ್ಲಿ ವಿದ್ಯುತ್ ಉತ್ಪಾದನೆ ಶುರುವಾಗುತ್ತದೆ. ನೀರಿನ ಒಳಹರಿವು, ನದಿ ಮತ್ತು ಕಾಲುವೆಗಳಿಗೆ ನೀರು ಹರಿಸುವ ಕಾಲಾವಧಿ ಅವಲಂಭಿಸಿ ಡಿಸೆಂಬರ್ ತನಕವೂ ವಿದ್ಯುತ್ ಉತ್ಪಾದನೆ ನಡೆಯುತ್ತಿರುತ್ತದೆ. ಇಲ್ಲಿರುವ ಎರಡೂ ಘಟಕಗಳಿಂದ ಒಟ್ಟು 15 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಆದರೆ ನೀರಿನ ಲೋಡ್ ಸೇರಿದಂತೆ ತಾಂತ್ರಿಕ ಅಂಶಗಳ ಕಾರಣದಿಂದ ಅನೇಕ ಸಂದರ್ಭಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್ ಉತ್ಪಾದನೆ ಆಗುವುದಿಲ್ಲ.
ಸದ್ಯ ಇಲ್ಲಿ ಮೊದಲ ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆ ಆಗುತ್ತಿದೆ. 9 ಮೆಗಾ ವ್ಯಾಟ್ ಸಾಮರ್ಥ್ಯದ ಈ ಘಟಕದಲ್ಲಿ ಈಗ 7 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಇನ್ನು 2-3 ದಿನಗಳಲ್ಲಿ 6 ಮೆಗಾ ವ್ಯಾಟ್ ಸಾಮರ್ಥ್ಯದ ಮತ್ತೊಂದು ಘಟಕದಲ್ಲೂ ವಿದ್ಯುತ್ ಉತ್ಪಾದನೆ ಶುರುವಾಗಲಿದೆ. ಈ ವರ್ಷ ಮೊದಲ ಘಟಕದಲ್ಲಿ 24 ದಶಲಕ್ಷ ಯೂನಿಟ್ ಮತ್ತು 2ನೇ ಘಟಕದಲ್ಲಿ 5 ದಶಲಕ್ಷ ಯೂನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿ ಇಟ್ಟುಕೊಳ್ಳಲಾಗಿದ್ದು, ಮುಂಗಾರು ಉತ್ತಮವಾಗಿದ್ದರೆ ಈ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದು ಕೇಂದ್ರದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಪಿಪಿಪಿ ಆಧಾರದಲ್ಲಿ ಹಾರಂಗಿಯಲ್ಲಿ ಕಾರ್ಯಾಚರಿಸುತ್ತಿರುವ ಇಡಿಸಿಎಲ್ ಸಂಸ್ಥೆಯ ಹಾರಂಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರದ ಮೊದಲ ಘಟಕ 1999ರಲ್ಲಿ ಆರಂಭವಾಯಿತು. 2013ರಲ್ಲಿ ಗರಿಷ್ಠ ಎಂದರೆ 32 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿದ ದಾಖಲೆ ಈ ಕೇಂದ್ರದ್ದಾಗಿದೆ. ಇದಕ್ಕೂ ಮೊದಲು 2010-2012ರಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗಿರಲಿಲ್ಲ. 2014-2018ರ ತನಕ ಇದೇ ಪರಿಸ್ಥಿತಿ ಪುನರಾವರ್ತನೆ ಆಯಿತು. ಮಳೆಯ ಕಣ್ಣಾಮುಚ್ಚಾಲೆಯಿಂದ ಈ ಪರಿಸ್ಥಿತಿ ಎದುರಾಗಿತ್ತು.
2018ರಲ್ಲಿ ಜಲಾನಯನ ಪ್ರದೇಶದಲ್ಲಿ ವಾಡಿಕೆಯಂತೆ ಉತ್ತಮ ಮಳೆಯಾಗುವ ಮಾಹಿತಿ ಸಿಕ್ಕಿದ್ದ ಕಾರಣ 31 ಮಿಲಿಯನ್ ಯೂನಿಟ್‌ಗಳಷ್ಟು ವಿದ್ಯುತ್ ಉತ್ಪಾದನೆಯ ಗುರಿ ನಿಗದಿಯಾಗಿತ್ತು. ಆದರೆ ಅವಧಿಗಿಂತಲೂ ಮುಂಚಿತವಾಗಿ ಅಣೆಕಟ್ಟೆ ಭರ್ತಿ ಆಗಿ ನದಿಗೆ ನೀರು ಹರಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗಿರಲಿಲ್ಲ. ಆ ವರ್ಷ ಅಣೆಕಟ್ಟೆ 2 ಬಾರಿ ಭರ್ತಿ ಆಗಿದ್ದು, ಆ.18ರಿಂದ ಡಿ.31ರ ತನಕ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯನಿರ್ವಹಿಸಿದರೂ ವಿದ್ಯುತ್ ಉತ್ಪಾದನೆಯಲ್ಲಿ ಗುರಿ ಮುಟ್ಟಲು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. 2019, 2020ರಲ್ಲೂ ಇದೇ ಪರಿಸ್ಥಿತಿ ಮರುಕಳಿಸಿತ್ತು.
2021, 22, 23ರಲ್ಲಿ ಮಳೆಯ ಪರಿಸ್ಥಿತಿ ಮತ್ತು ಅಣೆಕಟ್ಟೆ ಒಳಹರಿವು ಅವಲಂಬಿಸಿ ಈ ಕೇಂದ್ರದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಏರುಪೇರುಗಳಾಗಿದ್ದವು.
ಕಳೆದ ವರ್ಷ ಉತ್ತಮ ಮಳೆಯಾದರೂ ಘಟಕದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದ ಕಾರಣಕ್ಕೆ ವಿದ್ಯುತ್ ಉತ್ಪಾದನೆಯಲ್ಲಿ ವಾರ್ಷಿಕ ಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಅನುಕೂಲಕರ ಪರಿಸ್ಥಿತಿ ಇರುವುದರಿಂದ ವಿದ್ಯುತ್ ಉತ್ಪಾದನೆಯಲ್ಲಿ ಗುರಿ ತಲುಪಲಿದ್ದೇವೆ ಎನ್ನುತ್ತಾರೆ ಕೇಂದ್ರದ ಅಧಿಕಾರಿಗಳು. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ ಕುಶಾಲನಗರದಲ್ಲಿರುವ ವಿದ್ಯುತ್ ಸರಬರಾಜು ಕೇಂದ್ರದ ಮೂಲಕ ಸÀರ್ಕಾರ ನಿಗದಿಪಡಿಸಿರುವ ದರಪಟ್ಟಿಯಂತೆ ಕೆಪಿಟಿಸಿಎಲ್‌ಗೆ ಮಾರಲಾಗುತ್ತದೆ. ಯೂನಿಟ್‌ಗೆ ಸರಾಸರಿ 2.80 ರೂ. ದರ ಸಿಗುತ್ತದೆ.
ಇಡಿಸಿಎಲ್ ಸಂಸ್ಥೆಯ ಹಾರಂಗಿ ಜಲ ವಿದ್ಯುತ್ ಉತ್ಪಾದನಾ ಕೇಂದ್ರ ಜಿಲ್ಲೆಯ ಮೊದಲ ದೊಡ್ಡ ಪ್ರಮಾಣದ ವಿದ್ಯುತ್ ಉತ್ಪಾದನಾ ಕೇಂದ್ರವಾಗಿದೆ. 1999 ರ ಜುಲೈ 19ಕ್ಕೆ ಈ ಕೇಂದ್ರ ಆರಂಭವಾಯಿತು. ಮತ್ತೊಂದು ಕೇಂದ್ರ ಭಾಗಮಂಡಲ ಸಮೀಪದ ಕರಿಕೆಯ ಮಂಞಡ್ಕದಲ್ಲಿದ್ದು, ಈ ಕೇಂದ್ರ 2009ರ ಜೂ. 27ಕ್ಕೆ ಶುರುವಾಯಿತು. ಇದು 10 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದಕಾ ಕೇಂದ್ರವಾಗಿದ್ದು, ಮಂಞಡ್ಕ ನದಿ ನೀರಿನಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ. ಮೂರನೇ ಘಟಕ ಹಾರಂಗಿಯಲ್ಲಿ 2010 ಅ.19ಕ್ಕೆ ಆರಂಭವಾಯಿತು. ಇದು 6 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನಾ ಘಟಕವಾಗಿದೆ. ನಾಲ್ಕನೇ ಘಟಕ ಸೋಮವಾರಪೇಟೆ ತಾಲೂಕು ಬೀಡಳ್ಳಿಯಲ್ಲಿದೆ. 2016 ಜೂ. 13ಕ್ಕೆ ಇಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಯಿತು. ಕುಮಾರಧಾರ ನದಿ ನೀರನ್ನು ಇಲ್ಲಿ ಬಳಸಿಕೊಳ್ಳಲಾಗುತ್ತಿದ್ದು, ಈ ಘಟಕ 3 ಮೆ.ವ್ಯಾ. ಸಾಮರ್ಥ್ಯದ್ದಾಗಿದೆ.
ನದಿ ಅಥವಾ ಕಾಲುವೆಗೆ ಬಿಡುವ ನೀರನ್ನು ಬಳಸಿಕೊಂಡು ಹಾರಂಗಿ ಜಲವಿದ್ಯುತ್ ಕೇಂದರದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆ. ನಮ್ಮ ಕೇಂದ್ರ ಶುರುವಾದ ನಂತರ ಇದೇ ಮೊದಲ ಬಾರಿಗೆ ಜೂನ್‌ನಲ್ಲಿ ವಿದ್ಯುತ್ ಉತ್ಪಾದನೆ ಶುರು ಮಾಡಿದ್ದೇವೆ. ಈ ಹಿಂದೆ ಈ ದಾಖಲೆ ಜು.2ನೇ ತಾರೀಕಿನದ್ದಾಗಿತ್ತು. ಜೂ.3ರಿಂದಲೇ ವಿದ್ಯುತ್ ಉತ್ಪಾದನೆಗೆ ಅವಕಾಶಗಳಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯ ಆಗಿರಲಿಲ್ಲ. ಈಗ ಒಂದು ಘಟಕ ಕಾರ್ಯಾಚರಿಸುತ್ತಿದೆ. ಮತ್ತೊಂದು ಘಟಕ ಇನ್ನು 2-3ದಿನಗಳಲ್ಲಿ ಆರಂಭವಾಗಲಿದೆ.
- ಶಿವಸುಬ್ರಹ್ಮಣ್ಯಂ, ವ್ಯವಸ್ಥಾಪಕ, ಇಡಿಸಿಎಲ್