ಹೈದರಾಬಾದ್: ಆಟೋವೊಂದರಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಒಂದು ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಪ್ಯಾಕೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ.
ಮೂಲಗಳು ನೀಡಿದ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ಸಿದ್ದಿಯಂಬಾರ್ ಬಜಾರ್‌ನ ಸಮೀಪದಲ್ಲಿ ಆಟೋ ತಡೆದು ತಪಾಸಣೆ ಮಾಡಿದಾಗ, ಅದರಲ್ಲಿ ನಾನಾ ವಿದೇಶಿ ಬ್ರ್ಯಾಂಡ್‌ಗಳ 503 ಬಾಕ್ಸ್‌ಗಳು ಪತ್ತೆಯಾಗಿವೆ. ಆಟೋ ಚಾಲಕನನ್ನು ಬಂಧಿಸಲಾಗಿದೆ.
ನಂತರ ಆಟೋ ಚಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಇವುಗಳನ್ನು ಎಲ್ಲಿಂದ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ನೀಡಿದ್ದಾನೆ. ಆ ಮಾಹಿತಿಯನ್ನು ಆಧರಿಸಿ, ಪೊಲೀಸರು ಗೋಷ್‌ಮಹಲ್ ಸರ್ನಾ ಟ್ರಾನ್ಸ್ಪೋರ್ಟ್ಸ್ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿದ್ದ ವಿಪುಲ್ ರಾಂಕಾ, ಜಗದೀಶ್, ದುರ್ಗಾಚಂದ್, ಪವನ್ ಮತ್ತು ಡೆಲಿವರಿ ಏಜೆಂಟ್ ಎಂ.ಎ. ಹನೀಫ್ ಎಂಬುವವರನ್ನು ಬಂಧಿಸಿದ್ದಾರೆ. ಟ್ರಾನ್ಸ್‌ಪೋರ್ಟ್ ಮಾಲೀಕ ರವೀಂದರ್ ಸಿಂಗ್ ಸರ್ನಾ ತಲೆಮರೆಸಿಕೊಂಡಿದ್ದಾನೆ.
ಇವರಿಗೆ ಈ ವಿದೇಶಿ ಸಿಗರೇಟ್‌ಗಳು ದೆಹಲಿಯಿಂದ ಬರುತ್ತಿದ್ದವು. ಇವರು ಅವುಗಳನ್ನು ಬೇರೆ ಊರುಗಳಿಗೆ ಸಾಗಿಸುತ್ತಿದ್ದರು. ಅಲ್ಲದೆ ಹೈದರಾಬಾದ್‌ನ ಸಣ್ಣಪುಟ್ಟ ಗೂಡಂಗಡಿಗಳಿಗೂ ಪೂರೈಸುತ್ತಿದ್ದರು. ಸರ್ಕಾರಕ್ಕೆ ತೆರಿಗೆಯನ್ನೂ ಪಾವತಿಸುತ್ತಿರಲಿಲ್ಲ ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ಹೇಳಿದ್ದಾರೆ.