ಹೂವಿನಹಡಗಲಿ: ಪಟ್ಟಣದ ಮೂರು ಮನೆಗಳ ಕೀಲಿ ಮುರಿದು ಕಳ್ಳತವಾಗಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಪಟ್ಟಣದ ಬಸವೇಶ್ವರ ನಗರದ ನಿವೃತ್ತ ಶಿಕ್ಷಕ ಚನ್ನವೀರಸ್ವಾಮಿ ಎಂಬುವವರು ಕುಟುಂಬ ಸಮೇತ ಪರ ಊರಿಗೆ ತೆರಳಿದ್ದರು. ಮನೆಗೆ ಕೀಲಿ ಹಾಕಿರುವುದನ್ನು ಗಮನಿಸಿದ ಕಳ್ಳರು ಬುಧವಾರ ರಾತ್ರಿ ಮನೆಯ ಬೀಗ ಮುರಿದು ಮನೆಯೊಳಗಿದ್ದ ಹಣ, ಬೆಳ್ಳಿಯ ಆಭರಣ ಮತ್ತು ಒಂದು ಬೈಕ್ ಹಾಗೂ ಮನೆಯಲ್ಲಿದ್ದ ಉಂಡಿ ಹಾಗೂ ಇತರೆ ಖಾದ್ಯಗಳ ಡಬ್ಬಗಳನ್ನು ಕದಿದ್ದಾರೆ.
ಕೆಎಸ್‌ಆರ್‌ಟಿಸಿ ಕಾಲೋನಿಯಲ್ಲಿನ ನಿರ್ವಾಹಕಿ ಹೇಮಾ ಎಂಬುವವರ ಮನೆಯನ್ನು ಸತತವಾಗಿ ಆರನೇಬಾರಿಗೆ ಕಳ್ಳತನ ಮಾಡಿದ್ದಾರೆ. ಅದೇ ಕಾಲೋನಿಯಲ್ಲಿ ವಾಸವಾಗಿದ್ದ ಜೆಸ್ಕಾಂ ಸಿಬ್ಬಂದಿ ಜಗದೀಶ್‌ನಾಯ್ಕ ಎಂಬುವವರು ರಾತ್ರಿಪಾಳೆಯದ ಕರ್ತವ್ಯಕ್ಕೆ ತೆರಳಿದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಮನೆಯಲ್ಲಿನ ಹಣ ಮತ್ತು ಆಭರಣಗಳನ್ನು ದೋಚಿದ್ದಾರೆ.
ಸ್ಥಳಕ್ಕೆ ಪಿಎಸ್‌ಐ ವಿಜಯಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯ ಮಾಲೀಕರು ಬಂದ ನಂತರ ಏನೇನು ಕಳ್ಳತನವಾಗಿದೆ ಎಂಬುದು ತಿಳಿಯುತ್ತದೆ. ಪಟ್ಟಣದ ಜನರು ಪರ ಊರುಗಳಿಗೆ ತೆರಳುವಾಗ ಪೊಲೀಸ್‌ಠಾಣೆಗೆ ಮಾಹಿತಿ ನೀಡಿ ತೆರಳಿದರೆ ನಮ್ಮ ಇಲಾಖೆಯಿಂದ ನಿಗಾವಹಿಸಲಾಗುದು ಎಂದು ತಿಳಿಸಿದರು.