ಜಿಲ್ಲೆ

ಆರ್ಥಿಕ ಸಂಕಷ್ಟದಲ್ಲೂ ಗಣನೀಯ ಸೇವೆ; ಖಾಸಗಿ ಶಿಕ್ಷಣ ಸಂಸ್ಥೆಗಳ ಬಗ್ಗೆ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಶ್ಲಾಘನೆ


ಹೂವಿನಹಡಗಲಿ: ಖಾಸಗಿ ಶಿಕ್ಷಣ ಸಂಸ್ಥೆಗಳು ಸಂಕಷ್ಟಗಳ ನಡುವೆಯೂ ನಾಡಿಗೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅನೇಕ ಕೊಡುಗೆಗಳು ನೀಡುತ್ತಿವೆ ಎಂದು ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಜಿಬಿಆರ್ ಮಹಾವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸಾಮಾನ್ಯವಾಗಿ ಸಭಾಧ್ಯಕ್ಷರಿಗೆ ಮಾತು ಆಡುವುದು ಕಡಿಮೆ ಇರುತ್ತದೆ. ಆದರೆ, ಹೂವಿನಹಡಗಲಿ ನನ್ನ ಅಭಿಮಾನದ ಊರಾಗಿದ್ದು, ಮೊದಲ ಬಾರಿಗೆ ಗೆದ್ದು ಇಲ್ಲಿಯವರೆಗೂ ಬೆಳೆಯಲು ಪ್ರೆರಣೆ ನೀಡಿದ ವ್ಯಕ್ತಿ ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ ಅವರು. ಅವರ ಒಡೆತನದಲ್ಲಿ ನಾನು ಬೆಳೆದಿದ್ದೇನೆ. ಅವರೊಟ್ಟಿಗೆ ಅನೇಕ ಕೆಲಸಗಳನ್ನು ಮಾಡಿದ್ದೇನೆ. ಅವರು ರಾಜಕೀಯ ವ್ಯಕ್ತಿಯಾಗಿರದೆ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಶೈಕ್ಷಣಿಕ ವ್ಯಕ್ತಿಯಾಗಿದ್ದರು ಎಂದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಈ ನಾಡಿನಲ್ಲಿ ಶಿಕ್ಷಣ ಸಂಸ್ಥೆಗಳ ಅವಶ್ಯಕತೆ ಬಿದ್ದಾಗ ಅನೇಕ ಚಿಂತಕರು ಮತ್ತು ಶಿಕ್ಷಣ ತಜ್ಞರು ಕೂಡಿಕೊಂಡು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅದರಲ್ಲಿ ವೀರಶೈವ ವಿದ್ಯಾವರ್ಧಕ ಸಂಘವೂ ಒಂದಾಗಿದೆ. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಜಿಬಿಆರ್ ಮಹಾವಿದ್ಯಾಲ ಈಗ 50 ವರ್ಷದ ಸಂಭ್ರಮ ಕಾರ್ಯಕ್ರಮ ನಡೆಸುತ್ತಿರುವುದು ಸಂತಸ ತಂದಿದೆ. ಅನೇಕ ಏಳು, ಬೀಳುಗಳನ್ನು ಅನುಭವಿಸಿ ತನ್ನತನವನ್ನು ಉಳಿಸಿಕೊಂಡು ಬಂದಿದೆ ಎಂದು ಶ್ಲಾಘಿಸಿದರು.

ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಹಿಂದು ಪರಂಪರೆ ಸಾಂಸ್ಕೃತಿಕವಾಗಿ ಸಮೃದ್ಧವಾಗಿದೆ. ರಾಷ್ಟ್ರ ಮೊದಲು ಎನ್ನುವ ಅಭಿಮಾನ ಯುವಕರಲ್ಲಿ ಬೆಳೆದರೆ ಮಾತ್ರ ಭಾರತ ಶಕ್ತಿಶಾಲಿ ದೇಶವಾಗಲಿದೆ. ವಿದ್ಯಾರ್ಥಿಗಳು ಓದನ್ನು ಭಾವನಾತ್ಮಕವಾಗಿ ಮೈಗೂಡಿಸಿಕೊಳ್ಳಬೇಕು. ಸಾಧನೆ ಮಾಡಿ ಉನ್ನತ ಹುದ್ದೆಯನ್ನು ಪಡೆಯಬೇಕು. ಸುವರ್ಣ ಮಹೋತ್ಸವದ ಆಶಯಗಳನ್ನು ಈಡೇರಿಸಬೇಕು ಎಂದರು.

ಸರ್ಕಾರಿ ಸಂಸ್ಥೆಗಳು ಇಂದು ಖಾಸಗಿ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಶಿಕ್ಷಣ ನೀತಿಯಿಂದ ದೇಶದಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಕೌಶಲ ಪ್ರಧಾನವಾಗಿರುವ ಹೊಸ ಶಿಕ್ಷಣ ನೀತಿಯನ್ನು ನಾವೆಲ್ಲರೂ ಸ್ವಾಗತಿಸೋಣ. ಅನಕ್ಷರಸ್ಥರ ನಡುವೆಯೂ ಶಿಕ್ಷಣ ಪಡೆದವರು ಎಷ್ಟು ಬದಲಾಗಿದ್ದಾರೆ. ನೈತಿಕವಾಗಿ ಸಮಾಜ ಏನಾಗುತ್ತಿದೆ ಎಂಬುದು ಇಲ್ಲಿಯವರೆಗೂ ಪ್ರಶ್ನೆಯಾಗಿಯೇ ಉಳಿದಿದೆ. ಶಿಕ್ಷಕರು ಮಕ್ಕಳಿಗೆ ಪಠ್ಯದ ಜತೆಗೆ ನೈತಿಕ ಮೌಲ್ಯಗಳನ್ನು ತಿಳಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆಯಲ್ಲಿ ನಿಮ್ಮ ಮತವನ್ನು ಹಣ, ಹೆಂಡ, ಆಮಿಷಗಳಿಗೆ ಮಾರಾಟ ಮಾಡಿಕೊಳ್ಳಬಾರದು. ನನ್ನ ಮತ ಮಾರಾಟಕ್ಕಿಲ್ಲ ಎನ್ನುವ ಅಭಿಯಾನವನ್ನು ಯುವಕರು ಆರಂಭಿಸಬೇಕು ಎಂದರು.

ದಾನಿಗಳ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ಶಾಸಕ ಪಿ.ಟಿ.ಪರಮೇಶ್ವರನಾಯ್ಕ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯೆದೊರಕಿಸಬೇಕು ಎಂಬ ನಿಟ್ಟಿನಲ್ಲಿ ಆರಂಭವಾದ ಸಂಸ್ಥೆ ತನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಇಂತಹ ಸಂಸ್ಥೆಗೆ ಮುಂಬರುವ ದಿನಗಳಲ್ಲಿ 50 ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವೆ ಎಂದರು.

ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ.ವಿ.ಬಸವರಾಜ ಹೊನ್ನಬೆಳಗು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಇತರರು ಮಾತನಾಡಿದರು. ಪ್ರಾಚಾರ್ಯ ಎಸ್.ಎಸ್.ಪಾಟೀಲ್, ಪ್ರಭಾರ ಉಪನಿರ್ದೇಶಕ ನಾಗರಾಜ ಸಿ. ಹವಾಲ್ದಾರ್, ತಹಸೀಲ್ದಾರ್ ಕೆ.ಶರಣಮ್ಮ, ಪುರಸಭೆ ಅಧ್ಯಕ್ಷ ಜ್ಯೋತಿ ಮಲ್ಲಣ್ಣ ಇತರ ಗಣ್ಯರು ಇದ್ದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಸಂಕಷ್ಟ ಅನುಭವಿಸಬೇಕಾಗುತ್ತದೆ. ಸಮಿತಿ ರಚಿಸಿಕೊಂಡು ನೀತಿಯ ಅನುಷ್ಠಾನಕ್ಕೆ ಮುಂದಾಗಬೇಕು. ಆಗ ಮಾತ್ರ ಸವಾಲು ಎದುರಿಸಲು ಸಾಧ್ಯ.| ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭೆ ಸಭಾಧ್ಯಕ್ಷ