ಲಕ್ಷ್ಮೇಶ್ವರ: ಆತ್ಮಸಂತೋಷ, ನೆಮ್ಮದಿ ಮತ್ತು ಬದುಕಿನ ಸಾಕ್ಷಾತ್ಕಾರಕ್ಕಾಗಿ ಸಂತರ, ಶರಣರ, ಮಹಾತ್ಮರ ಪುರಾಣ ಪುಣ್ಯಕಥೆ ಕೇಳುವುದು ಅವಶ್ಯಕವಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀಚನ್ನವೀರ ಸ್ವಾಮೀಜಿ ಹೇಳಿದರು.
ಶ್ರೀಮಠದ 45ನೇ ಜಾತ್ರಾ ಮಹೋತ್ಸವ ಮತ್ತು ಲಿಂ.ನಿರಂಜನ ಮಹಾಸ್ವಾಮೀಜಿಯವರ 14ನೇ ಪುಣ್ಯಾರಾಧನೆ ಮಹೋತ್ಸವ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಶಿರಹಟ್ಟಿ ಜಗದ್ಗುರು ಶ್ರೀ ಫಕೀರೇಶ್ವರರ ಪುರಾಣ-ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
‘ಜಗದ್ಗುರು ಶ್ರೀ ಫಕೀರೇಶ್ವರರು ಜಾತಿ, ಮತ, ಧರ್ಮ ಭೇದ-ಬಾವ ಅಳಿಸಿ ದ್ವೇಷಬಿಡು ಪ್ರೀತಿ ಮಾಡು ಎಂಬ ಭಾವೈಕ್ಯದ ಮಂತ್ರ ಸಾರಿದ್ದಾರೆ. ಶರಣರು-ಸಂತರು, ಸ್ವಾಮೀಜಿಗಳು ಸಮಾಜದ ಉದ್ಧಾರಕ್ಕಾಗಿ ತ್ರಿವಿಧ ದಾಸೋಹ ಸೇವೆ ಮಾಡಿ ಎಲ್ಲರ ಬದುಕಿಗೆ ದಾರಿದೀಪವಾಗಿದ್ದಾರೆ.
ವಿಶ್ವಕ್ಕೆ ಮಾದರಿಯಾದ ನಮ್ಮ ನಾಡಿನ ಧರ್ಮ, ಸಂಸ್ಕೃತಿ, ಸಂಪ್ರದಾಯ, ಪರಂಪರೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸಮಾಜಕ್ಕೆ ದಾರಿದೀಪವಾಗಿರುವ ಶರಣರ, ಮಹಾತ್ಮರ ಸ್ಮರಣೆ ಮತ್ತು ಚರಿತ್ರೆ ಆಲಿಸುವ ಮೂಲಕ ಮಾನವೀಯ ಸಮಾಜ ನಿರ್ಮಿಸಬೇಕಿದೆ.
ಪ್ರತಿಯೊಬ್ಬರೂ ತಮ್ಮ ಬದುಕಿನ ಪಾವಿತ್ರ್ಯತೆ ಮತ್ತು ಸಾರ್ಥಕತೆಗಾಗಿ ಧರ್ಮ, ಆಧ್ಯಾತ್ಮ, ಸತ್ಸಂಗವನ್ನು ಅಳವಡಿಸಿಕೊಳ್ಳಬೇಕು’ ಎಂದರು.
ಗವಿಸಿದ್ಧೇಶ್ವರ ಶಾಸ್ತ್ರಿಗಳು ಪ್ರವಚನ ನೀಡಿದರು. ರವಿಕುಮಾರ ಆಳಂದ ಹಾಗೂ ತೊಟೇಂದ್ರ ಕುಮಾರ ಕರಡಕಲ್ ಸಂಗೀತ ಸೇವೆ ನೀಡಿದರು. ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಗಡ್ಡೆಣ್ಣನವರ, ಸದಸ್ಯ ಯಲ್ಲವ್ವ ಕುಂದಗೋಳ, ಗಿರಿಜವ್ವ ಗೋನಾಳ, ನೀಲವ್ವ ಬಾನಗೊಂಡ, ಬಸವರಾಜ ಹಳೇಮನಿ, ರೇಣುಕಗೌಡ ಪಾಟೀಲ, ಪಿ.ಎಚ್. ಪಾಟೀಲ, ಮಾಂತೇಶ ಹುಲ್ಲೂರು ಇತರರಿದ್ದರು. ಮಹದೇವ ನಿರೂಪಿಸಿದರು.