ಜಿಲ್ಲೆ

ಆದರ್ಶ ಶಾಲೆ ಹತ್ತಿರ ಬಸ್ ನಿಲ್ಲಿಸಲು ಮನವಿ

ಹೂವಿನಹಿಪ್ಪರಗಿ: ಹುಣಶ್ಯಾಳ ಪಿಬಿ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯ ಬಳಿ ಎಲ್ಲ ನಿಗಮದ ಬಸ್‌ಗಳನ್ನು ನಿಲುಗಡೆ ಮಾಡಬೇಕೆಂದು ಆಗ್ರಹಿಸಿ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಪರಶುರಾಮ ಅಡಗಿಮನಿ ಮಾತನಾಡಿ, ನಮ್ಮ ಶಾಲೆಯಲ್ಲಿ 400 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಶಿಕ್ಷಕ,ಶಿಕ್ಷಕೇತರ 25 ಜನ ಸಿಬ್ಬಂದಿ ತಾಲೂಕಿನ ಬೇರೆ-ಬೇರೆ ಗ್ರಾಮಗಳಿಂದ ಶಾಲೆಗೆ ಆಗಮಿಸುತ್ತಿದ್ದಾರೆ. ಆದರೆ, ಬಸವನಬಾಗೇವಾಡಿ ಸೇರಿದಂತೆ ಇತರ ಘಟಕದ ಬಸ್‌ಗಳು ಶಾಲೆ ಬಳಿ ನಿಲ್ಲಿಸುತ್ತಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬೆಳಗಿನ ತರಗತಿಗಳಿಗೆ ಮತ್ತು ಸಂಜೆ ವೇಳೆ ಬೇರೆ ಬೇರೆ ಗ್ರಾಮಗಳಿಗೆ ತೆರಳಲು ತೀವ್ರ ತೊಂದರೆಯಾಗುತ್ತಿದೆ.

ವಿಜಯಪುರ, ಬಸವನಬಾಗೇವಾಡಿ, ತಾಳಿಕೋಟೆ ಹಾಗೂ ಮುದ್ದೆಬಿಹಾಳ ಘಟಕದ ಎಲ್ಲ ಬಸ್‌ಗಳನ್ನು ಆದರ್ಶ ವಿದ್ಯಾಲಯದ ಹತ್ತಿರ ನಿಲ್ಲಿಸಬೇಕೆಂದು ಒತ್ತಾಯಿಸಿದರು. ಜಿಪಂ ಸದಸ್ಯ ಸಂತೋಷ ನಾಯಕ, ಪುರಸಭೆ ಸದಸ್ಯೆ ನೀಲು ನಾಯಕ, ಬಲವಂತ ಚವ್ಹಾಣ್, ಶಿವನಗೌಡ ಪಾಟೀಲ, ಅಶೋಕ ಡಮನಾಳ ಇತರರಿದ್ದರು.