ಹೂವಿನಹಡಗಲಿ (ವಿಜಯನಗರ): ಬಿ.ಎಸ್.ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಪಟ್ಟ ಅಲಂಕರಿಸಿ ಇನ್ನೂ ಐದು ದಿನವಾಗಿಲ್ಲ. ಈಗ ಇವರ ಅಧಿಕಾರವಧಿಯೂ ಕೇವಲ ಏಳೆಂಟು ತಿಂಗಳು ಮಾತ್ರವೇ, ನಂತರ ಗಡ್ಡಧಾರಿ ವ್ಯಕ್ತಿಯೊಬ್ಬರು ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಸುಕ್ಷೇತ್ರ ಮೈಲಾರದ ಮೈಲಾರ ಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಶ್ರೀಗುರು ವೆಂಕಟಪ್ಪಯ್ಯ ಒಡೆಯರ್ ಭವಿಷ್ಯ ನುಡಿದಿದ್ದಾರೆ.
ವಿಜಯವಾಣಿಯೊಂದಿಗೆ ಭಾನುವಾರ ಮಾತನಾಡಿದ ಅವರು, ಮೈಲಾರ ಕಾರ್ಣಿಕ ಭವಿಷ್ಯದಂತೆ ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳು ರಾಜ್ಯಭಾರ ನಡೆಸಲಿದ್ದಾರೆ. ನಾಡಿನ ಭವಿಷ್ಯ ನುಡಿವ ಕಾರ್ಣಿಕದ ನುಡಿ ಎಂದಿಗೂ ಸುಳ್ಳಾಗಿಲ್ಲ. ಈ ಹಿಂದಿನ ನುಡಿದ ‘ಮುತ್ತಿನ ರಾಶಿ ಮೂರು ಪಾಲ್ ಆಯಿತಲೇ ಪರಾಕ್’ ವಾಣಿಯಂತೆ ಮೂವರು ಸಿಎಂಗಳು ರಾಜ್ಯ ಆಳಲಿದ್ದಾರೆ ಎಂದರು.
ಕಳೆದ ಜು.18ರಂದು ಬಸವರಾಜ ಬೊಮ್ಮಾಯಿಯವರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಂದೇ ನಾನು ಅವರಿಗೆ ಆಶೀರ್ವಾದ ಮಾಡಿ ಮುಂದಿನ ಸಿಎಂ ನೀವೇ ಎಂದು ಹೇಳಿದ್ದೆ. ಅದರಂತೆ ಅವರು ಈಗ ಸಿಎಂ ಆಗಿದ್ದಾರೆ. ಆದರೆ, ಅನೇಕ ತೊಂದರೆಗಳು ಇವರಿಗೆ ಎದುರಾಗಲಿದ್ದು, ಕೇವಲ ಏಳೆಂಟು ತಿಂಗಳು ಮಾತ್ರ ಅಧಿಕಾರ ನಡೆಸಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿರುವ ಪ್ರಮುಖ ರಾಜಕಾರಣಿ ಹಾಗೂ ಗಡ್ಡಧಾರಿ ವ್ಯಕ್ತಿಯೊಬ್ಬರು ರಾಜ್ಯದ ಸಿಎಂ ಆಗುತ್ತಾರೆ. ಮೈಲಾರ ಲಿಂಗೇಶ್ವರ ಕಾರ್ಣಿಕದ ನುಡಿ ಎಂದೂ ಸುಳ್ಳಾಗಿಲ್ಲ, ಸತ್ಯವೇ ನಡೆಯುತ್ತದೆ ಎಂದು ಮತ್ತೊಮ್ಮೆ ಹೇಳಿದರು.