ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾ ಸ.ಕಿ.ಪ್ರಾ. ಶಾಲೆಯ 3 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಭೂಮಿಪೂಜೆ ನೆರವೇರಿಸಿದರು.  
ಜಿಲ್ಲೆ

ಕಿ.ಪ್ರಾ.ಶಾಲೆಗೆ ಇನ್ನೆರಡು ಕೊಠಡಿ ಶೀಘ್ರ, ಹೂವಿನಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಭರವಸೆ

ಹೂವಿನಹಡಗಲಿ: ಲಿಂಗನಾಯಕನಹಳ್ಳಿ ತಾಂಡಾ ಸರ್ಕಾರಿ ಶಾಲೆಯ ನೂತನ ಕೊಠಡಿಗಳ ನಿರ್ಮಾಣ ಈ ಹಿಂದೆಯೇ ಆಗಬೇಕಿತ್ತು. ವಿಳಂಬವಾಗಿದ್ದು, ಶೀಘ್ರ ಇನ್ನೆರಡು ಕೊಠಡಿಗಳನ್ನು ಮಂಜೂರು ಮಾಡಿಸಲಾಗುವುದು ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.

ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದಡಿ 3 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಕೊಠಡಿಗಳು ಶಿಥಿಲಾವಸ್ಥೆಗೆ ಬಂದಿರುವ ಬಗ್ಗೆ ಗ್ರಾಮಸ್ಥರು ಗಮನಕ್ಕೆ ತಂದಿದ್ದರು. ಡಿಸಿಗೂ ಮಾಹಿತಿ ನೀಡಿದ ನಂತರ ಅವರೂ ಬಂದು ಪರಿಶೀಲಿಸಿ ಹೋಗಿದ್ದರು. ಈಗ ಮೂರು ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಕೆಲ ದಿನಗಳಲ್ಲಿ ಇನ್ನೆರಡು ಕೊಠಡಿಗಳನ್ನು ಮಂಜೂರು ಮಾಡಿಸುವ ಜತೆಗೆ ಅಗತ್ಯ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು ಎಂದರು.

ಕಿ.ಪ್ರಾ.ಶಾಲೆಯನ್ನು ಹಿ.ಪ್ರಾ. ಶಾಲೆಯನ್ನಾಗಿ ಉನ್ನತೀಕರಿಸಲು ಗ್ರಾಮಸ್ಥರು ಮನವಿ ಸಲ್ಲಿಸಿದರು. ಜೂನ್ ತಿಂಗಳಲ್ಲಿ ಆದೇಶ ಹೊರಡಿಸಲಾಗುವುದು. ಶಿಕ್ಷಕರ ಕೊರತೆ ನೀಗಿಸಲು ಬಿಇಒ ಜತೆಗೆ ಮಾತನಾಡಿ, ಹೆಚ್ಚುವರಿ ಶಿಕ್ಷಕರನ್ನು ಕೊರತೆ ಇರುವ ಕಡೆ ಬಳಸುವ ಜತೆಗೆ ಅತಿಥಿ ಶಿಕ್ಷಕರ ಸೇವೆಯನ್ನು ಪಡೆದುಕೊಳ್ಳಲಾಗುವುದು ಎಂದು ಎಂದು ಶಾಸಕರು ಭರವಸೆ ನೀಡಿದರು. ಅಲ್ಲದೇ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹೊಳಲು ಗ್ರಾಮವನ್ನು ಪ.ಪಂ. ಆಗಿ ಮೇಲ್ದರ್ಜೆಗೇರಿಸಲಾಗುವುದು ಎಂದರು.

ಎಸ್ಡಿಎಂಸಿ ಅಧ್ಯಕ್ಷ ಆನಂದ್ ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಶಂಕರ್ ಎನ್.ಹಳ್ಳಿಗುಡಿ, ಕಾರ್ಯಪಾಲಕ ಅಭಿಯಂತರ ಡಿ.ಜಯರಾಮ್ ನಾಯ್ಕ, ಎಸ್‌ಡಿಎಂಸಿ ಉಪಾಧ್ಯಕ್ಷ ಶಂಕರ್ ನಾಯ್ಕ, ಮುಖ್ಯ ಶಿಕ್ಷಕ ಚಂದ್ರನಾಯ್ಕ, ಶಿಕ್ಣಕರಾದ ಕೆ.ಗೋಣೆಪ್ಪ, ಕೆ.ಮಹೇಶ್, ವೆಂಕಟೇಶ್ ಪಟಗಿ, ವಕೀಲ ಚಂದ್ರನಾಯ್ಕ, ಪ್ರಮುಖರಾದ ಬಾಲಾಜಿನಾಯ್ಕ, ರಾಜಾನಾಯ್ಕ, ಅನಂತ, ಚಿನ್ನಪ್ಪ ಕಟ್ಟಿ, ಸುರೇಶ, ವೆಂಕಟೇಶ ನಾಯ್ಕ ಇತರರಿದ್ದರು.