ಹೂವಿನಹಡಗಲಿ: ಸರ್ಕಾರಿ ಶಾಲೆಗಳ ಆಸ್ತಿ ನೋಂದಣಿ ಅಭಿಯಾನದಡಿ ಮಾಗಳ ಗ್ರಾಮದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಭೂದಾನಿ ಶಿಕ್ಷಣ ಇಲಾಖೆಗೆ ನೋಂದಾಯಿತ ದಾನಪತ್ರ ಹಸ್ತಾಂತರಿಸಿದರು.
ಗ್ರಾಮದ ಗುಂಜಾಳ ಭೋಜರಾಜಪ್ಪ ಅವರು 75 ವರ್ಷಗಳ ಹಿಂದೆ ಗ್ರಾಮದಲ್ಲಿ ಸರ್ಕಾರಿ ಶಾಲೆ ನಿರ್ಮಾಣಕ್ಕಾಗಿ ಗ್ರಾಮ ಠಾಣಾಕ್ಕೆ ಹೊಂದಿಕೊಂಡ ಒಂದು ಎಕರೆ ಭೂಮಿ ದಾನ ಮಾಡಿದ್ದರು. ಕಾರಣಾಂತರಗಳಿಂದ ಆಸ್ತಿ ಶಿಕ್ಷಣ ಇಲಾಖೆಗೆ ನೋಂದಣಿಯಾಗಿರಲಿಲ್ಲ. ಅವರ ಪುತ್ರ ಗುಂಜಾಳ ಬುಜಬಲಿ ಅವರು ಸ್ವಯಂಪ್ರೇರಣೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ದಾನಪತ್ರ ನೀಡಿದರು.
ಬಿಇಒ ಮಹೇಶ ಪೂಜಾರ್ ಮಾತನಾಡಿ, ತಾಲೂಕಿನಲ್ಲಿ ಇನ್ನೂ 37 ಶಾಲೆಗಳ ಆಸ್ತಿಗಳು ನೋಂದಣಿಯಾಗಬೇಕಾಗಿದ್ದು, ಎಲ್ಲ ಭೂದಾನಿಗಳ ಮನವೊಲಿಸುವ ಕೆಲಸ ನಡೆಯುತ್ತಿದೆ. ಸ್ವಯಂಪ್ರೇರಣೆಯಿಂದ ಆಸ್ತಿಪತ್ರ ನೀಡುತ್ತಿರುವುದು ಜಿಲ್ಲೆಗೆ ಮಾದರಿಯಾಗಿದೆ ಎಂದರು.
ಗ್ರಾಪಂ ಉಪಾಧ್ಯಕ್ಷ ಯಳಮಾಲಿ ವಿರೂಪಾಕ್ಷಪ್ಪ, ನಿವೃತ್ತ ಶಿಕ್ಷಕ ಎಂ.ಶಾಂತರಾಜ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿ.ಬಿ.ಜಗದೀಶ, ಬಿಆರ್‌ಸಿ ಎ.ಕೋಟೆಪ್ಪ, ಮುಖ್ಯಶಿಕ್ಷಕ ಡಿ.ವಿರುಪಣ್ಣ, ಪ್ರಮುಖರಾದ ತೋಟದ ಮಲ್ಲಿಕಾರ್ಜುನಪ್ಪ, ರಂಗಾಪುರ ನಾಗೇಶ, ಕೆ.ಸತ್ಯನಾರಾಯಣ ರೆಡ್ಡಿ, ಬಸ್ತಿ ಭರತೇಶ, ಎ.ಜಯಕೀರ್ತಿ, ಎ.ಯಶೋದರಗೌಡ, ಎಲ್.ಮಂಜುನಾಥ ಇತರರಿದ್ದರು.