ಹೂವಿನಹಡಗಲಿ ತಾಲೂಕು ಪಂಚಾಯತಿಯ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಎಸ್ಪಿ ಶ್ರೀಹರಿಬಾಬು ಮಾತನಾಡಿದರು. ಡಿವೈಎಸ್ಪಿ ಮಹಾಂತೇಶ್ ಕೆ, ಸಿಪಿಐ ಸುಧೀರ್‌ಕುಮಾರ್ ಬೆಂಕಿ ಇದ್ದರು. 
ಜಿಲ್ಲೆ

ಮದ್ಯ ಅಕ್ರಮ ಮಾರಾಟ ತಡೆಗೆ ಅಗತ್ಯ ಕ್ರಮ

ಹೂವಿನಹಡಗಲಿ: ವಿಜಯನಗರ ಜಿಲ್ಲೆಯಲ್ಲಿ ಜೂಜಾಟ, ಇಸ್ಪೀಟ್, ಮಟ್ಕಾ ಹಾಗೂ ಮದ್ಯ ಅಕ್ರಮ ಮಾರಾಟ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಶ್ರೀಹರಿಬಾಬು ಬಿ.ಎಲ್. ಹೇಳಿದರು.

ಪಟ್ಟಣದ ತಾಪಂ ರಾಜೀವ್ ಗಾಂಧಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದು, ಪ್ರತಿ ವೃತ್ತದಲ್ಲಿ ಪೊಲೀಸರನ್ನು ನಿಯೋಜಿಸಬೇಕು. ಸಂಜೆ ಆಗುತ್ತಿದ್ದಂತೆ ಬಹುತೇಕ ಸಾರ್ವಜನಿಕ ಪ್ರದೇಶಗಳಲ್ಲಿ ಕುಡುಕರ ಹಾವಳಿ ಹೆಚ್ಚಿದ್ದು, ಕ್ರಮವಹಿಸಬೇಕು. ಇಸ್ಪೀಟ್, ಜೂಜಾಟ, ಮದ್ಯ ಅಕ್ರಮ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಸ್ಥಳೀಯರಾದ ಶಂಕರಪ್ಪ, ಕೋಡಿಹಳ್ಳಿ ಮುದುಕಪ್ಪ ಸಭೆ ಗಮನಕ್ಕೆ ತಂದರು.

ಇದಕ್ಕೆ ಎಸ್ಪಿ ಪ್ರತಿಕ್ರಿಯಿಸಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಇವೇ ಸಮಸ್ಯೆಗಳಿದ್ದು, ಕ್ರಮವಹಿಸಲಾಗುವುದು. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

ಪ್ರತಿ ಗ್ರಾಮದಲ್ಲಿ ದೂರು ಪೆಟ್ಟಿಗೆ ಇಡಬೇಕು. ಹೊಳಗುಂದಿ, ಬಿತ್ಯಾನತಾಂಡಾ ಹಾಗೂ ಸುತ್ತಲಿನ ಗ್ರಾಮಗಳ ಸರ್ಕಾರಿ ಶಾಲೆಗಳ ಆವರಣದಲ್ಲಿ ಸಂಜೆಯಾಗುತ್ತಿದಂತೆ ಕುಡುಕರು ಹಾವಳಿ ಹೆಚ್ಚಾಗಿದೆ. ಮದ್ಯ ಕುಡಿದು ಬಾಟಲಿಗಳನ್ನು ಅಲ್ಲಿ ಬಿಸಾಡುತ್ತಿದ್ದು, ಸೂಕ್ತ ಕ್ರಮವಹಿಸಬೇಕು. ಮಾಗಳ ಗ್ರಾಮದಲ್ಲಿ ಖಾಸಗಿ ಮದ್ಯದ ಅಂಗಡಿ ತೆರವಿಗೆ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದರಿಂದ ನಿತ್ಯ ಶಾಲೆಗೆ ಹೋಗುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ದಲಿತ ಸಭೆ ಮಾಡಿ ಕಾನೂನು ಅರಿವು ಮೂಡಿಸಬೇಕು ಎಂದು ಕೆ.ಅಯ್ಯನಹಳ್ಳಿ ಗ್ರಾಮದ ವೆಂಕಟೇಶ, ಎಐಟಿಯುಸಿ ತಾಲೂಕು ಕಾರ್ಯದರ್ಶಿ ಹಲಗಿ ಸುರೇಶ್ ತಿಳಿಸಿದರು.

ಎಸ್ಪಿ ಶ್ರೀಹರಿಬಾಬು ಮಾತನಾಡಿ, ಇನ್ನೊಂದು ತಿಂಗಳಲ್ಲಿ ಎಲ್ಲ ಸಮಸ್ಯೆಗಳ ಪರಿಹರಿಸಲು ಪ್ರಯತ್ನಿಸಲಾಗುವುದು. ಮೂರು ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಲಾಗುವುದು ಇತ್ತೀಚೆಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿದ್ದು ಯಾರೂ ಖಾಸಗಿ ವ್ಯಕ್ತಿಗಳಿಗೆ ಮೊಬೈಲ್ ಸಂಖ್ಯೆ, ಎಟಿಎಂ ಮೇಲಿನ ಸಂಖ್ಯೆಗಳನ್ನು ಹೇಳಬಾರದು. ಪಟ್ಟಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಅನುದಾನ ನೀಡುವಂತೆ ಡಿಸಿ ಜತೆ ಚರ್ಚಿಸಲಾಗಿದೆ. ಇಟ್ಟಿಗಿ, ಹಿರೇಹಡಗಲಿ, ಹೂವಿನಹಡಗಲಿ ಠಾಣೆಗಳ ವ್ಯಾಪ್ತಿಯಲ್ಲಿ 15 ದಿನಕ್ಕೊಮ್ಮೆ ಕಡ್ಡಾಯವಾಗಿ ಗಸ್ತು ತಿರುಗುವಂತೆ ಸೂಚಿಸಲಾಗುವುದು ಎಂದರು. ಡಿವೈಎಸ್ಪಿ ಮಹಾಂತೇಶ್ ಕೆ, ಸಿಪಿಐ ಸುಧೀರ್‌ಕುಮಾರ್ ಬೆಂಕಿ, ಪಿಎಸ್‌ಐಗಳಾದ ವಿಜಯಕೃಷ್ಣ, ಸೈಫುಲ್ಲಾ, ಶಿವಕುಮಾರ್ ನಾಯ್ಕ ಇತರರಿದ್ದರು.