ಹೂವಿನಹಡಗಲಿ: ಸಿಂಗಟಾಲೂರು ಏತ ನೀರಾರಿ ಯೋಜನೆಗೆ ಭೂಮಿ ಕಳೆದುಕೊಂಡಿರುವ ಮುಂಡರಗಿ ತಾಲೂಕಿನ ಮುಂಡವಾಡ ಹಾಗೂ ಹಮಿಗಿ ಗ್ರಾಮದ ರೈತರು ಬುಧವಾರ ಪಟ್ಟಣದಲ್ಲಿ ಯೋಜನೆಯ ಭೂಸ್ವಾಧಿನಾಧೀಕಾರಿ ಕಚೇರಿಗೆ ಮುತ್ತಿಗೆ ಹಾಕಿ ‘ನಮಗೆ ನಿಮ್ಮ ಪರಿಹಾರದ ಹಣ ಬೇಡ, ನಮ್ಮ ಭೂಮಿ ನಮಗೆ ಕೊಟ್ಟು ಬಿಡಿ’ ಎಂದು ಪ್ರತಿಭಟನೆ ನಡೆಸಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಕೊ.ಪಾಟೀಲ ಮಾತನಾಡಿ, ನಮ್ಮ ಜಮೀನಲ್ಲಿ ಕಾಲುವೆಗಳನ್ನು ನಿರ್ಮಾಣ ಮಾಡಿ ಇಲ್ಲಿವರೆಗೂ ಕಾಲುವೆಗಳಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಿಲ್ಲ. 2013 ರಲ್ಲಿ ಭೂಮಿ ವಶಪಡಿಸಿಕೊಂಡಿದ್ದಾರೆ. 2025 ಬಂದರೂ ನಮಗೆ ಪರಿಹಾರ ನೀಡಿಲ್ಲ.
ಮಾರ್ಚ್‌ನಲ್ಲಿ ಪ್ರತಿಭಟನೆ ಮಾಡಿದಾಗ ಇನ್ನೆರಡು ತಿಂಗಳಲ್ಲಿ ಹಣ ನೀಡುತ್ತೇವೆಂದು ಹೇಳಿದ್ದರು. ಆದರೆ, ನೀಡಿಲ್ಲ. ನಮಗೆ ನಮ್ಮ ಪರಿಹಾರದ ಹಣ ನೀಡುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.
ನಮಗೆ ನಮ್ಮ ಭೂಮಿ ಮರಳಿ ನೀಡಿ ಎಂದು ಪಟ್ಟು ಹಿಡಿದು, ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಸ್ಥಳದಲ್ಲಿಯೇ ಇದ್ದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿದರು.
ನಂತರ ಮುಂಡರಗಿ ವಿಭಾಗದ ಎಇಇ ರಮೇಶ್ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಇನ್ನೆರಡು ತಿಂಗಳಲ್ಲಿ ಪೂರ್ಣ ಪ್ರಮಾಣದ ಪರಿಹಾರದ ಹಣವನ್ನು ನೀಡುವುದಾಗಿ ಲಿಖಿತವಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯಿಂದ ಹಿಂದೆ ಸರಿದರು.
ರೈತರಾದ ಶಿವಪ್ಪ ತಳವಾರ, ಮಲ್ಲಿಕಾರ್ಜುನಗೌಡ, ಗಂಗಾಧರ, ಗೌರಮ್ಮ, ಲಕ್ಕವ್ವ, ಹೊನ್ನಪ್ಪ, ತಿಮ್ಮಣ್ಣ, ಬಸಪ್ಪ ಬಡ್ನಿ, ಮಾರುತೆಪ್ಪ, ಮಂಜುನಾಥ, ಬಸವರಾಜ, ಮಂಜುನಾಥ, ನಿಂಗನಗೌಡ, ರಾಜು, ಮಲ್ಲಪ್ಪ, ಪರಮೇಶಪ್ಪ, ಹನುಮಂತಪ್ಪ ಹಾಗೂ ಇತರರಿದ್ದರು.