ಹೂವಿನಹಡಗಲಿ: ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಶ್ರೀ ಕಠೀರವ ಕ್ರೀಡಾಂಗಣದಲ್ಲಿ ಆ.26 ರಿಂದ 28ರ ವರೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಹೂವಿನಹಡಗಲಿಯ ಜಿ.ಬಿ.ಆರ್ ಕಾಲೇಜಿನ ಬಿ.ಎ.ಪ್ರಥಮ ವರ್ಷದ ವಿದ್ಯಾಥಿಗಳು 3 ಪದಕ ಪಡೆದಿದ್ದಾರೆ ಎಂದು ಜಿ.ಬಿ.ಆರ್ ಕಾಲೇಜು ಪ್ರಾಚಾರ್ಯ ಪ್ರೊ.ಎಸ್.ಎಸ್.ಪಾಟೀಲ್ ಮಂಗಳವಾರ ತಿಳಿಸಿದರು.
ಪುರುಷರ ವಿಭಾಗದಲ್ಲಿ ರಾಥೋಡ್ ಲೋಕೇಶ್ ದಾಮು, ಡೆಕಾಥ್ಲಾನ್ ಮತ್ತು ಪೋಲ್‌ವಾಲ್ಟ್ ಗಳಲ್ಲಿ ಎರಡು ಚಿನ್ನದ ಪದಕ ಪಡೆಯುವ ಮೂಲಕ ಕೂಟ ದಾಖಲೆ ಮಾಡಿದ್ದಾರೆ. 20 ವರ್ಷದೊಳಗಿನ ಪುರುಷರ ವಿಭಾಗದಲ್ಲಿ ಬಿ.ಎ. ಪ್ರಥಮ ವರ್ಷದ ವಿದ್ಯಾರ್ಥಿ ಸಚಿನ್ ಸರಪಳಿ ಎಸೆತದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾನೆ. ಇಬ್ಬರೂ ವಿದ್ಯಾರ್ಥಿಗಳಿಗೆ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಎಂ.ಗುರುಸಿದ್ಧಸ್ವಾಮಿ, ಉಪಾಧ್ಯಕ್ಷ ಅಲ್ಲಂ ಚನ್ನಪ್ಪ, ಕಾರ್ಯದರ್ಶಿ ಬಿ.ವಿ ಬಸವರಾಜ್ ಮತ್ತು ಜಿ.ಬಿ.ಆರ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.