ಹೂವಿನಹಡಗಲಿ: ಮಹಿಳೆಯರಿಗೆ ಶಿಕ್ಷಣದ ಅವಕಾಶ ನೀಡಿರುವುದರಿಂದ ದೇಶದ ತಾಂತ್ರಿಕ, ಸಂಶೋಧನೆ ಹಾಗೂ ಉತ್ಪಾದನೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ನಿವೃತ್ತ ಶಿಕ್ಷಕಿ ಎ.ವನಜಾಕ್ಷಿ ಹೇಳಿದರು.
ಪಟ್ಟಣದ ಜಿಬಿಆರ್ ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಮಹಿಳೆಯನ್ನು ಗೌರವಿಸುವ ಮತ್ತು ಅವಳಿಗೆ ಸ್ವಾತಂತ್ರ್ಯವನ್ನು ನೀಡುವಂತಹ ಸಮಾಜವನ್ನು ನಾವು ನಿರ್ಮಿಸಬೇಕೆಂದರು.
ಪ್ರಾಚಾರ್ಯ ಎಸ್.ಎಸ್.ಪಾಟೀಲ ಮಾತನಾಡಿ, ದೇಶದಲ್ಲಿ ಸ್ತ್ರೀ, ಪುರುಷ ಲಿಂಗಾನುಪಾತದಲ್ಲಿ ವ್ಯತ್ಯಾಸವಿದೆ. ಹೆಣ್ಣು ಮಕ್ಕಳು ಜನಿಸಿರೆ ಸಂಭ್ರಮಿಸುವ ಬದಲು ಸಂಕಟ ಪಡುವ ವಾತಾವರಣ ನಿರ್ಮಾಣವಾಗುತ್ತಿರುವುದು ಖೇದಕರ ಸಂಗತಿ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಶೇ.19 ಮಹಿಳೆಯರ ಕೊಡುಗೆಯಿದೆ. ಮಹಿಳೆಯರು ಕೇವಲ ವಿವಾಹದ ಕಾರಣಕ್ಕಾಗಿ ಪದವಿ ಪಡೆಯುತ್ತಿದ್ದಾರೆ. ವಿದ್ಯಾಭ್ಯಾಸದ ನಂತರ ಉದ್ಯೋಗ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು.
ಐಕ್ಯೂಎಸಿ ಸಂಯೋಜಕಿ ಡಾ.ಮಹಿಮಾ ಜ್ಯೋತಿ ಮಾತನಾಡಿ, ಗ್ರಾಮೀಣ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕೊಡಿಸುವುದರಿಂದ ಉನ್ನತಮಟ್ಟದ ಸಾಧನೆ ಮಾಡಲು ಹಾಗೂ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದರು.