ಹೂವಿನಹಡಗಲಿ: ಯುವಕರು ಮಾದಕ ವಸ್ತುಗಳ ದುಶ್ಚಟಗಳಗೆ ದಾಸರಾಗಿ ಬದುಕನ್ನು ನಾಶ ಮಾಡಿಕೊಳ್ಳುತ್ತಿರುವುದು ಆಘಾತಕಾರಿ ಎಂದು ಸಿಪಿಐ ಆರ್.ದೀಪಕ್ ಬೂಸರೆಡ್ಡಿ ಹೇಳಿದರು.
ಪಟ್ಟಣದ ಜಿಬಿಆರ್ ಕಾಲೇಜಿನ ಹಾನಗಲ್ಲ ಕುಮಾರೇಶ ಸಭಾಂಗಣದಲ್ಲಿ ಪೊಲೀಸ್ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯವಂತ ಸಮಾಜವನ್ನು ಕಟ್ಟಬೇಕಿದೆ. ಭವಿಷ್ಯವನ್ನು ನಾಶ ಮಾಡುವ ಮಾದಕ ವಸ್ತುಗಳ ವಿರುದ್ಧ ಯುವಕರು ಹೋರಾಡಬೇಕಿದೆ. ಮಾದಕ ವಸ್ತುಗಳು ಸೇವನೆ ಮಾಡಿದವರನ್ನಷ್ಟೆ ಅಲ್ಲ ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತದೆ. ಕಾನೂನಿನಡಿ ಎಲ್ಲರೂ ಸಮಾನರು, ಕಾನೂನನ್ನು ಗೌರವಿಸಿ ಉತ್ತಮ ಪ್ರಜೆಗಳಾಗಿ ಎಂದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಸಾಧನೆಗಾಗಿ ಶ್ರಮಿಸಬೇಕು. ಸಾಕಷ್ಟು ಜನರು ಮದ್ಯ ವ್ಯಸನಿ ಗಳಾಗುತ್ತಿದ್ದಾರೆ. ವ್ಯಸನಮುಕ್ತ ಸಮಾಜ ನಿರ್ಮಾಣ ಎಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಪೊಲೀಸ್ ಇಲಾಖೆಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಶ್ರೀ ರಾಮದೇವಸ್ಥಾನದ ಧರ್ಮಕರ್ತ ಡಾ.ರಾಕೇಶಯ್ಯ ರಾಮಸ್ವಾಮಿ, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಶಿವಕುಮಾರ್, ಪ್ರಾಚಾರ್ಯರಾದ ಎಸ್.ಎಸ್.ಪಾಟೀಲ, ಎನ್.ಅಮರೇಗೌಡ ಪಾಟೀಲ, ಪಿಎಸ್‌ಐಗಳಾದ ಭರತ್ ಪ್ರಕಾಶ್, ಜಿ.ಕೆ.ಅಬ್ಬಾಸ್, ವಾಸು, ಸಿಬ್ಬಂದಿ ಗುರುಬಸವರಾಜ, ಶಾಂತಕುಮಾರ್, ಪರಶುರಾಮ್, ಹಾಲೇಶ್ ಇತರರಿದ್ದರು.