ಹೂವಿನಹಡಗಲಿ: ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಎಸ್ಸಿ-ಎಸ್ಟಿ ಇಲಾಖೆಗಳ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಸೂಚನೆ ನೀಡಿದರು.
ಪಟ್ಟಣದ ತಾಪಂ ರಾಜೀವ್‌ಗಾಂಧಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದರು. ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವ ಜಮೀರ್, ಡಿಸಿ ಎಂ.ಎಸ್.ದಿವಾಕರ ಮಾತನಾಡಿ, ತಾಲೂಕಿನ ಹಾಸ್ಟೆಲ್‌ಗಳಲ್ಲಿರುವ 1,750 ವಿದ್ಯಾರ್ಥಿಗಳ ಪೈಕಿ 1,500 ಮಕ್ಕಳಿಗೆ ಬೆಡ್‌ಗಳ ವ್ಯವಸ್ಥೆ ಇಲ್ಲ. ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ಸುಳ್ಳು ಮಾಹಿತಿ ನೀಡಿದ್ದೀರಿ. ನಿಮ್ಮ ವಿರುದ್ಧ ಸೂಕ್ತ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳು ಮಾಹಿತಿ ನೀಡಲು ತಡಕಾಡಿದಾಗ ಸಚಿವ ಜಮೀರ್, ನಿಮಗೆ ಕಿವಿ ಕೇಳಿಸುತ್ತಾ ಇಲ್ವಾ? ಸುಳ್ಳು ಸುಳ್ಳು ಮಾಹಿತಿ ಕೊಡ್ತೀರಾ? ಮಾಧ್ಯಮದವರ ಮುಂದೆ ಮಾರ್ಯಾದೆ ತೆಗೆಯೋಕೆ ಇಷ್ಟ ಇಲ್ಲ. ನಿಮ್ಮ ಮಕ್ಕಳನ್ನು ಬೆಡ್ ಇಲ್ಲದೆ ನೆಲದ ಮೇಲೆ ಮಲಗಿಸುತ್ತೀರಾ? ಎಂದು ಗದರಿಸಿದರು.
ಪಟ್ಟಣದಲ್ಲಿ 6 ಘೋಷಿತ ಕೊಳಚೆ ಪ್ರದೇಶಗಳಲ್ಲಿ ವಸತಿರಹಿತರ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಪ್ರತಿ ಗ್ರಾಮದಲ್ಲೂ ಮನೆ ಬಾಗಿಲಿಗೆ ಇ-ಸ್ವತ್ತ ದಾಖಲೆ ತಲುಪಿಸುವ ಕುರಿತು ಹೆಚ್ಚು ಪ್ರಚಾರ ನಡೆಸಬೇಕು.
ಇದನ್ನೂ ಓದಿ:Zameer Ahmed Khan Fumes At Officer | ಮೈನಾರಿಟಿ ಇಲಾಖೆ ಅಧಿಕಾರಿಗೆ ಸಚಿವ ಜಮೀರ್ ಅಹ್ಮದ್ ಕ್ಲಾಸ್
ಪ್ರತಿ ತಿಂಗಳು ಕನಿಷ್ಠ 2 ಸಾವಿರ ಇ-ಸ್ವತ್ತು ಸಾರ್ವಜನಿಕರಿಗೆ ಮನೆಬಾಗಿಲಿಗೆ ಒದಗಿಸಬೇಕು. ಇದಕ್ಕೆ ಅಗತ್ಯ ದಾಖಲೆ ನೀಡುವ ಬಗ್ಗೆ ಪ್ರಚಾರ ಮಾಡಬೇಕು ಎಂದು ಸಚಿವ ಜಮೀರ್ ತಿಳಿಸಿದರು. ಇದೇ ವೇಳೆ ಗೃಹಜ್ಯೋತಿ, ಗೃಹಲಕ್ಷ್ಮೀ, ಮೀನುಗಾರಿಕೆ ಇಲಾಖೆ ಹಾಗೂ ಪಿಂಚಣಿ, ಸಣ್ಣ ಉಳಿತಾಯ ಇಲಾಖೆಯ ಫಲಾನುಭವಿಗಳು ಹಾಗೂ ಅರ್ಜಿದಾರರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಜಿಪಂ ಸಿಇಒ ಸದಾಶಿವ ಪ್ರಭು, ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಾಲನ್, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಕಾರ್ಮಿಕ ಕಾರ್ಡ್ ಸೇರಿ ಇತರ ಸೌಲಭ್ಯಗಳ ಕುರಿತು ಅಪೂರ್ಣ ಮಾಹಿತಿಯೊಂದಿಗೆ ಆಗಮಿಸಿದ್ದ ಕಾರ್ಮಿಕ ಇಲಾಖೆ ಅಧಿಕಾರಿ ವಿರುದ್ಧ ಜಮೀರ್ ಹರಿಹಾಯದ್ದರು. ನಿಮ್ಮಂತಹವರನ್ನು ಕಟ್ಟಿಕೊಂಡು ಹೇಗೆ ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ತಲುಪಿಸಲಾಗುತ್ತದೆ. ಮೊದಲು ನೀವು ಸೌಲಭ್ಯಗಳ ಪೂರ್ಣ ಮಾಹಿತಿ ಪಡೆಯಿರಿ. ಆಮೇಲೆ ಕಾರ್ಮಿಕರಿಗೆ ತಿಳಿಸಿ. ಕಾರ್ಮಿಕರಿಗೆ ಕಾರ್ಮಿಕ ಕಾರ್ಡ್ ಮಾಡಿಸಿ. ಬಾಲಕಾರ್ಮಿಕರ ರಕ್ಷಣೆಗೆ ಕ್ರಮಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.